ಮೈಸೂರು

ಜಾನಪದ ನಮ್ಮ ನಾಡಿನ ಕಲೆ: ಗೀತಾ ಮಹದೇವಪ್ರಸಾದ್

ಮೈಸೂರು, ಸೆ.೨೬: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಜೆ.ಕೆ.ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಮಹಿಳೆಯರಿಗೆ ಜಾನಪದ ಗೀತೆ, ನೃತ್ಯ, ಕಾರ್ಯಕ್ರಮವನ್ನು ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ವರ್ಷ ಮಹಿಳಾ ದಸರಾದ ಮುಖ್ಯ ಅತಿಥಿಯಾಗಿ ಸಚಿವರ ಪತ್ನಿಯಾಗಿ ಭಾಗವಹಿಸಿದ್ದೆ. ಈ ಬಾರಿ ಇದೇ ಕಾರ್ಯಕ್ರಮದಲ್ಲಿ ಸಚಿವೆಯಾಗಿ ಭಾಗವಹಿಸಿದ್ದಕ್ಕೆ ತುಂಬ ಸಂತೋಷವಾಗಿದೆ. ಹಿಂದೆ ೧೬೧೦ರಲ್ಲಿ ರಾಜರು ದಸರಾ ಆರಂಭಿಸಿದರು. ಆ ಬಳಿಕ ಮಹಿಳಾ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ ಹೀಗೆ ಮೈಸೂರಿನಲ್ಲದೇ ಮಡಿಕೇರಿ, ಚಾಮರಾಜನಗರದಲ್ಲಿಯೂ ದಸರಾ ಆಚರಣೆ ಮಾಡುತ್ತಿದ್ದಾರೆ. ಸರ್ಕಾರ ಈ ದಸರಾಗೆ ಹೆಚ್ಚಿನ ಮಹತ್ವ ನೀಡಿದೆ. ಜಾನಪದ ನಮ್ಮ ನಾಡಿನ ಕಲೆ. ಹಿರಿಯರು ಕೊಟ್ಟ ಕೊಡುಗೆಯಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ದಸರಾವನ್ನು ಆಯೋಜಿಸಲಾಗಿದೆ. ಮಹಿಳೆಯರಿಗೆ ಮಕ್ಕಳಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಎಲ್ಲರೂ ಒಗ್ಗೂಡಿ ಈ ಕಾರ್ಯಕ್ರಮವನ್ನು ಸದುಪಯೋಗಿಸಿಕೊಳ್ಳಿ ಎಂದರು.
ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಜಾನಪದ ಕಲಾವಿದೆ ಕೆಂಪಮ್ಮ ಅವರು ಹಾಡು ಹಾಡಿ ಎಲ್ಲರನ್ನೂ ರಂಜಿಸಿದರು. ಜಾನಪದ ಗೀತೆ ಹಾಗೂ ನೃತ್ಯಕ್ಕೆ ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಮಹಿಳೆಯರು ತಂಡೋಪ ತಂಡವಾಗಿ ವೇದಿಕೆಯನ್ನೇರಿ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮೈಲಾಕ್ ವೆಂಕಟೇಶ್ ಹೆಚ್.ಎ.ವೆಂಕಟೇಶ್, ಜಾನಪದ ಕಲಾವಿದೆ ಮರಿಸಿದ್ದಮ್ಮ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷೆ ಲತಾ ಮೋಹನ್, ಕಾರ್ಯಾಧ್ಯಕ್ಷೆ ಕೆ.ರಾಧ, ರಾಣಿ ಪ್ರಭಾ, ಸುಶೀಲಾ ಮರಿಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: