ಕರ್ನಾಟಕಪ್ರಮುಖ ಸುದ್ದಿ

ರಾಜ್ಯದ ಜನತೆ ನೂರು ಜನ ಕನ್ನಡ ಕಟ್ಟಾಳುಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿ ವಿಧಾನಸೌಧದ ಮೇಲೆ ಕನ್ನಡ ಬಾವುಟ ಹಾರಿಸಬೇಕು : ವಾಟಾಳ್ ನಾಗರಾಜ್ ಮನವಿ

ರಾಜ್ಯ(ಬೆಂಗಳೂರು)ಸೆ.26:- ಬರಲಿರುವ 2018ರ ಚುನಾವಣೆ ರಾಜ್ಯಕ್ಕೆ ಮಹಾ ಪರ್ವಕಾಲ, ಮಹಾಯುದ್ಧದ ಕಾಲವಾಗಿದ್ದು, ರಾಜ್ಯದ ಜನತೆ ನೂರು ಜನ ಕನ್ನಡ ಕಟ್ಟಾಳುಗಳನ್ನು ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ವಿಧಾನಸೌಧದ ಮೇಲೆ ಕನ್ನಡ ಬಾವುಟ ಹಾರಿಸಬೇಕು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದರು.

ವಾಟಾಳ್ ನಾಗರಾಜ್ ಅಭಿಮಾನಿಗಳ ಸಂಘ ಪುರಭವನದಲ್ಲಿ ಏರ್ಪಡಿಸಿದ್ದ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 1962 ರಿಂದ ಇಲ್ಲಿಯವರೆಗೆ ಕನ್ನಡ ಹೋರಾಟವನ್ನು ತಪಸ್ಸಿನಂತೆ ಮಾಡಿಕೊಂಡು ಬಂದಿದ್ದೇನೆ. ಕನ್ನಡ ಕಟ್ಟಾಳುಗಳ ಸರ್ಕಾರ ಬರಬೇಕು ಎಂದು ಕನಸು ಕಾಣುತ್ತಿದ್ದೇನೆ. ಈ ಹೋರಾಟ ಬಿಟ್ಟು ಬೇರೆ ರಾಜಕೀಯ ಪಕ್ಷ ಸೇರಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು ಎಂದ ಅವರು, ತಮ್ಮ ಹೋರಾಟ ಸಾರ್ಥಕಗೊಳ್ಳಲು ಜನರು ನೂರು ಜನರನ್ನು ಗೆಲ್ಲಿಸಲೇಬೇಕು ಎಂದು ಹೇಳಿದರು. ಕನ್ನಡ ನಾಡು-ನುಡಿ ಅಭ್ಯುದಯಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಯಾವುದೇ ಕಾಳಜಿ ಇಲ್ಲ ಎಂದ ಅವರು, ಕನ್ನಡ ಒಕ್ಕೂಟ ಮಾತ್ರ ಕನ್ನಡ, ಕಾವೇರಿ, ಕಳಸಾ-ಬಂಡೂರಿ, ಉತ್ತರ ಕರ್ನಾಟಕ ಬಯಲು ಸೀಮೆ ನೀರಿನ ಸಮಸ್ಯೆಗಳು ಸೇರಿದಂತೆ ಕನ್ನಡ ಅಭ್ಯುದಯಕ್ಕಾಗಿ ಗಂಭೀರ ಹೋರಾಟ ನಡೆಸಿಕೊಂಡು ಬಂದಿದೆ. ಮೈಯಲ್ಲಿ ಕೊನೆಯ ರಕ್ತ ಇರುವವರೆಗೂ ಕನ್ನಡಕ್ಕಾಗಿ ಹೋರಾಡುವುದಾಗಿಯೂ ಹೇಳಿದರು. ಕನ್ನಡ ಕಟ್ಟಾಳುಗಳನ್ನು ಗೆಲ್ಲಿಸಲು ಕರ್ನಾಟಕ ಪ್ರಜಾ ಸಂಯುಕ್ತ ರಂಗ ನಿರ್ಮಾಣ ಮಾಡುವ ಉದ್ದೇಶವಿದೆ. ಕನ್ನಡ ಒಕ್ಕೂಟವು ಕಂಡಿರುವ ರಾಜ್ಯದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವ ಕನಸಿನಂತೆ ಇದೇ ನವೆಂಬರ್ 2ರಿಂದ ಬೀದರ್ ಜಿಲ್ಲೆಯಲ್ಲೇ ಹೋರಾಟವನ್ನು ಆರಂಭಿಸಿ ಇಡೀ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಹೊಸ ಶಕ್ತಿ ಉಂಟಾಗಲು ಶ್ರಮಿಸುವುದಾಗಿ ತಿಳಿಸಿದರು.ವಾಟಾಳ್ ಅವರು 1962ರಲ್ಲಿ ನಗರದಲ್ಲಿದ್ದ ಅಲಂಕಾರ್ ಚಿತ್ರಮಂದಿರದಲ್ಲಿ ಹಿಂದಿ ಚಿತ್ರವನ್ನು ತೆಗೆಯುವಂತೆ ನಡೆಸಿದ್ದ ಕನ್ನಡ ಪರ ಹೋರಾಟ ಸಂದರ್ಭದಲ್ಲಿ ಹೋರಾಟ ತೀವ್ರ ಸ್ವರೂಪವನ್ನು ಪಡೆದು ಅವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಅವರಿಗೆ ಕನ್ನಡಪರ ಹೋರಾಟ ನಡೆಸಿದ್ದಕ್ಕಾಗಿ ಬೂಟ್ ತೆಗೆದು ಹೊಡೆದಿದ್ದರು. ಈ ಸಂಬಂಧ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಸೆ. 7ರಂದು ಶಾಸನ ಸಭೆಯಲ್ಲಿ ಈ ರೀತಿ ಹೊಡೆದಿದ್ದು ತಪ್ಪಾಯಿತು ಎಂದಿದ್ದರು. ಅದೇ ದಿನವನ್ನೇ ವಾಟಾಳ್ ಅವರ ಹುಟ್ಟುಹಬ್ಬವಾಗಿ ಅಭಿಮಾನಿಗಳು ಆಚರಿಸಿಕೊಂಡು ಬಂದಿದ್ದಾರೆ. ಇಂದು ಮಾರುಕಟ್ಟೆಯಿಂದ ಮಂಗಳವಾದ್ಯಗಳು, ಬೊಂಬೆ ಕುಣಿತದ ಮೆರವಣಿಗೆಯೊಂದಿಗೆ ಅವರನ್ನು ರಥ ವಾಹನದಲ್ಲಿ ಪುರಭವನಕ್ಕೆ ಕರೆತರಲಾಯಿತು. ಅಲ್ಲಿ ಅವರ ಮಗಳು ಅನುಪಮ ವಾಟಾಳ್ ನಾಗರಾಜ್, ‌ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕನ್ನಡ ಸೇನೆ ಮುಖಂಡರಾದ ಗಿರೀಶ್ ಗೌಡ, ಕುಮಾರ್ ಸೇರಿದಂತೆ ಅನೇಕ ಕನ್ನಡಪರ, ರೈತಪರ ಸಂಘಟನೆಗಳ ನಾಯಕರು ಅವರನ್ನು ಬರಮಾಡಿಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: