ಪ್ರಮುಖ ಸುದ್ದಿ

ವಿಷನ್ ೨೦೨೫ ಡಾಕ್ಯುಮೆಂಟ್ ಪ್ರಾಜೆಕ್ಟ್: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ 

ಪ್ರಮುಖ ಸುದ್ದಿ, ಚಾಮರಾಜನಗರ, ಸೆ.೨೬: ವಿಷನ್ ೨೦೨೫ ಡಾಕ್ಯುಮೆಂಟ್ ಯೋಜನೆ ಅಂಗವಾಗಿ ೨೦೨೫ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದರ ಕುರಿತು ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿಷನ್ ೨೦೨೫ ಡಾಕ್ಯುಮೆಂಟ್ ಪ್ರಾಜೆಕ್ಟ್ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯ ನೀಲನಕ್ಷೆ ಮತ್ತು ಅನುಷ್ಠಾನ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಕಾರ್ಯಾರಂಭ ಮಾಡಿದೆ. ಇದಕ್ಕಾಗಿ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ, ನಗರ ಮತ್ತು ಗ್ರಾಮೀಣಾಭಿವೃದ್ಧಿ, ಆಡಳಿತ, ಕಾನೂನು ಸೇರಿದಂತೆ ಪ್ರಮುಖ ಇಲಾಖೆಗಳನ್ನೊಳಗೊಂಡ ೧೩ ವಲಯಗಳನ್ನು ಗುರುತಿಸಿದೆ ಎಂದರು.ವಿಷನ್ ಡಾಕ್ಯುಮೆಂಟರಿ ಪ್ರಾಜೆಕ್ಟ್ ತಯಾರಿಸಲು ಜಿಲ್ಲಾಡಳಿತ ೧೩ ವಲಯಗಳನ್ನು ಪರಿಷ್ಕರಿಸಿ ೫ ಗುಂಪು-ತಂಡಗಳನ್ನಾಗಿ ವಿಂಗಡಿಸಿದೆ. ನಗರ ಮೂಲಸೌಲಭ್ಯ ಹಾಗೂ ಸ್ಮಾರ್ಟ್‌ಸಿಟಿ, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಶಿಕ್ಷಣ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕಾಭಿವೃದ್ಧಿ ಮತ್ತು ಸೇವೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಇವೇ ೫ ಪ್ರಮುಖ ವಲಯಗಳಾಗಿವೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: