ಮೈಸೂರು

ಭಾರೀ ಮಳೆಗೆ ಧರೆಗುರುಳಿದ ಮರ; ಕಾಂಪೌಂಡ್ ಕುಸಿತ; ನಾಲ್ವರಿಗೆ ಗಾಯ

ಮೈಸೂರು,ಸೆ.27:- ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ ನಡೆಯುತ್ತಿದ್ದು, ಕಳೆದೆರಡು ದಿನಗಳಿಂದ ರಾತ್ರಿ ಮೈಸೂರಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಂಗಳವಾರ ಸುರಿದ ಮಳೆಗೆ ಹಲವೆಡೆ ಭಾರೀ ಅವಾಂತರ ಸೃಷ್ಟಿಯಾಗಿದ್ದು ಅನಾಹುತಗಳು ನಡೆದಿವೆ.

ನಗರದ ಹಲವೆಡೆ ಮರಗಳು ಮುರಿದು ಬಿದ್ದಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಎಡಬಿಡದೆ ಸುರಿಯುತ್ತಿರೋ  ಭಾರೀ ಮಳೆಯಿಂದ ಅಲೀಂ ನಗರದಲ್ಲಿ ಕಾಂಪೌಂಡ್ ಕುಸಿದು ನಾಲ್ವರಿಗೆ ಗಾಯಗಳಾಗಿವೆ. ಭಾರೀ ಮಳೆಗೆ ಸ್ಲಂ ಬೋರ್ಡ್ ಒಂದನೇ ಬ್ಲಾಕ್ ನಲ್ಲಿ ಮನೆಗಳು ಬಿರುಕು ಬಿಟ್ಟಿವೆ. ನಿವಾಸಿಗಳು ಕಟ್ಟಡ ಕುಸಿಯುವ ಆತಂಕದಲ್ಲಿದ್ದಾರೆ.  ಇದೇ ರೀತಿ ಮೈಸೂರಿನ ಗುಂಡೂರಾವ್ ನಗರ, ಪಡುವಾರಹಳ್ಳಿ, ಗೌಸಿಯಾನಗರ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಹೂಟಗಳ್ಳಿಯ ಸೈಲೆಂಟ್ ಶೋರ್ ರೆಸಾರ್ಟ್ ಪಕ್ಕದ ಕೆರೆ ಒಡೆದು ಭಾರೀ ಹಾನಿ ಸಂಭವಿಸಿದೆ. ಮಳೆರಾಯನ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹೂಟಗಳ್ಳಿಯಲ್ಲಿ ಗೋಣಿ ಕೆರೆ ಒಡೆದು ಮನೆಗೆ ನೀರು ನುಗ್ಗಿದೆ. ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು,  ಮೈಸೂರಿನ ಕನಕಗಿರಿ, ಗುಂಡೂರಾವ್ ನಗರ ಕೆರೆಯಂತಾಗಿದೆ.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೆಟ್ಟಿಲಿನಲ್ಲಿ ಜಲಪಾತದ ರೀತಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವುದು ಕಂಡು ಬಂತು. ಮಳೆಯ ರುದ್ರ ನರ್ತನಕ್ಕೆ ಮೈಸೂರಿನ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ ನಗರ ಬಹುತೇಕ ಜಲಾವೃತಗೊಂಡಿದ್ದು, ಜೆ.ಸಿ ನಗರದ ರಸ್ತೆಗಳಲ್ಲಿ ನೀರು ಉಕ್ಕಿ ಉಕ್ಕಿ ಹರಿಯುತ್ತಿದೆ. ಚಾಮುಂಡಿ ಬೆಟ್ಟದ ಮೇಲ್ಭಾಗದಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಬೆಟ್ಟದ ತಪ್ಪಲಿನಲ್ಲಿರುವ ತಾವರೆಕೆರೆ ತಲುಪಿ ಭರ್ತಿಯಾದ ಪರಿಣಾಮ ಕೆರೆ ಕೋಡಿ ಬಿದ್ದ ನೀರು ಜೆ.ಸಿ ನಗರ ಬಡಾವಣೆಗೆ ಹರಿದು ಬರುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ರಾತ್ರಿಯಿಡೀ ಸುರಿದ ಮಳೆ ಬುಧವಾರ ಬೆಳಗಿನ ವೇಳೆ ಸ್ವಲ್ಪ ವಿರಾಮ ಪಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: