ಕರ್ನಾಟಕ

ಹಣ ದುರುಪಯೋಗ : ದ್ವಿತೀಯದರ್ಜೆ ಸಹಾಯಕನಿಗೆ 3 ವರ್ಷಗಳ ಸಜೆ

ರಾಜ್ಯ(ಚಾಮರಾಜನಗರ) ಸೆ. 27: – ಖೋಟಾ ಬಿಲ್ಲುಗಳಿಗೆ ಅಧಿಕಾರಿಯ ಫೋರ್ಜರಿ ಸಹಿ ಮಾಡಿ ಹಣ ದುರುಪಯೋಗಪಡಿಸಿಕೊಂಡ ಜಲಾನಯನ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರಿಗೆ ನಗರದ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ 3 ವರ್ಷಗಳ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಚಾಮರಾಜನಗರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎ.ಎಂ. ವೆಂಕಟೇಶ್ ಶಿಕ್ಷೆಗೆ ಗುರಿಯಾದವರು. ಇವರು ಕಳೆದ 2001ರ ಸೆಪ್ಟೆಂಬರ್ ನಿಂದ 2002ರ ಮಾರ್ಚ್ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿಯದಂತೆ ಅವರ ಪೂರಕ ವೇತನದ ಖೋಟಾ ಬಿಲ್ಲುಗಳನ್ನು ತಯಾರಿಸಿ ಬಟವಾಡೆ ಅಧಿಕಾರಿಗಳಂತೆ ಸಹಿ ಮಾಡಿ ಇಲಾಖೆಯ ಡಿ ದರ್ಜೆ ನೌಕರರಾಗಿದ್ದ ಬಸವಯ್ಯನವರ ಮುಖಾಂತರ ಜಿಲ್ಲಾ ಖಜಾನೆಗೆ ಸಲ್ಲಿಸಿ ಚೆಕ್ಕುಗಳನ್ನು ಪಡೆದುಕೊಂಡಿದ್ದರು. ಬಳಿಕ ಚೆಕ್ಕಿನ ಹಿಂಭಾಗದಲ್ಲೂ ಬಡವಾಡೆ ಅಧಿಕಾರಿಯ ಫೋರ್ಜರಿ ಸಹಿ ಮಾಡಿ ಬ್ಯಾಂಕಿನಿಂದ 8,79,070 ರೂ.ಗಳನ್ನು ಪಡೆದು ದುರುಪಯೋಗ ಮಾಡಿಕೊಂಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೆಂಕಟೇಶ್ 768172 ರೂ.ಗಳನ್ನು ಸರ್ಕಾರಕ್ಕೆ ಪಾವತಿಸಿದ್ದು ಉಳಿಕೆ 1,10,898 ರೂ.ಗಳನ್ನು ಪಾವತಿಸಬೇಕಿರುವುದು ತನಿಖೆಯಿಂದ ಕಂಡುಬಂದಿತ್ತು. ಸದರಿ ಪ್ರಕರಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೆಂಕಟೇಶನಿಗೆ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯವು 3 ವರ್ಷಗಳ ಸಜೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್ ಶೆಣೈ ಅವರು ವಾದ ಮಂಡಿಸಿದ್ದರು. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: