ಮೈಸೂರು

ವಿವಿಧ ಸಂಸ್ಕೃತಿಗಳನ್ನು ಅನಾವರಣಗೊಳಿಸಿದ ಓಪನ್ ಸ್ಟ್ರೀಟ್ ಫೆಸ್ಟ್

ಮೈಸೂರು,ಸೆ.27 : ನಾಡ ಹಬ್ಬ ದಸರಾ ಸಂದರ್ಭದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಸಂಯುಕ್ತವಾಗಿ ಇಂದು ದೇವರಾಜ ಅರಸ್ ರಸ್ತೆಯಲ್ಲಿ ಆಯೋಜಿಸಿದ್ದ  ಓಪನ್ ಸ್ಟ್ರೀಟ್ ಫೆಸ್ಟ್  ವಿದೇಶಿ ಮಾದರಿಯ ಕಾರ್ನಿವಲ್ ಪೆಸ್ಟಿವಲ್ ಅನ್ನು ನಾಚಿಸುವಂತೆ ಕಂಗೊಳಿಸಿತು.

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಓಪನ್ ಫೆಸ್ಟ್ ನ್ನು ಉದ್ಘಾಟಿಸಿ ಕಾಲ್ನಡಿಗೆಯಲ್ಲಿ ಒಂದು ಸುತ್ತು ಹಾಕಿ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾದ  ಓಪನ್ ಸ್ಟ್ರೀಟ್ ಫೆಸ್ಟ್  ಅನ್ನು  ಮೈಸೂರು ದಸರಾ ಸಂದರ್ಭದಲ್ಲಿ ಆಯೋಜಿಸಿ ಪ್ರವಾಸಿಗರನ್ನು ಸೆಳೆಯುವ ಮೂಲಕ  ಹೊಸತನವನ್ನು ನೀಡಲಾಗಿದೆ.  ಸಾರ್ವಜನಿಕರ ಉತ್ಸಾಹದಿಂದ ಪಾಲ್ಗೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ  ವರ್ಷಕ್ಕೊಂದು ದಿನವನ್ನು ಇದಕ್ಕಾಗಿ ಮೀಸಲಿರಿಸಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ವಿಶ್ವಪ್ರವಾಸೋದ್ಯಮದ ದಿನದ ಅಂಗವಾಗಿ ಪ್ರಯೋಗಿಕವಾಗಿ ಇಂದು ಹಮ್ಮಿಕೊಂಡಿರುವ ಓಪನ್ ಸ್ಟ್ರೀಟ್ ಫೆಸ್ಟಿವಲ್ ಅನ್ನು ಮುಂದಿನ ದಿನಗಳಲ್ಲಿ  ಶಾಲಾ ಕಾಲೇಜುಗಳ ರಜೆ ದಿನಗಳನ್ನು ನೋಡಿಕೊಂಡು ಸೂಕ್ತ ಸಮಯ ಆಯೋಜಿಸಲಾಗುವುದು ಎಂದ ಅವರು, ಈ ವಿನೂತನ  ಫೆಸ್ಟ್  ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ  ಹೆಚ್ಚು ಹೆಚ್ಚು ಬಾರಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪೆಸ್ಟ್  ನಲ್ಲಿ ಕಾಲೇಜು ವಿದ್ಯಾರ್ಥಿಗಳು,  ಹಲವಾರು ಸಂಘ ಸಂಸ್ಥೆಗಳು, ಅನ್ ಲೈನ್ ಉದ್ಯಮಿಗಳು ಪಾಲ್ಗೊಂಡಿದ್ದರು. ಕಾವಾ ಕಾಲೇಜಿನ ವಿದ್ಯಾರ್ಥಿಗಳು  ರಂಗೋಲಿ ಪುಡಿಯಲ್ಲಿ  ಜಂಬೂ ಸವಾರಿ, ಮಹಿಷಾಸುರ, ಆನೆ, ಪ್ರಕೃತಿ, ವಿವಿಧ ಚಿತ್ತಾರಗಳು ಸೇರಿದಂತೆ ಹಲವಾರು ಚಿತ್ರಕಲೆ, ಕುಂಬಾರಿಕೆ ಮಳಿಗೆಗಳು ಪ್ರೇಕ್ಷಕರ ಮನೋಲ್ಲಾಸಗೊಳಿಸಿ ಸೆಳೆದವು.

ಕೇರಳದ ಅಲಂಕಾರಿ ಒಣ ಹೂವುಗಳು, ಮೈಸೂರು ತಂಜಾವೂರ ಚಿತ್ರಕಲೆ, ತೆರಾಕೋಟಾ ಒಡವೆಗಳು, ಕಾಟನ್ ಸೀರೆಗಳು, ಸಿದ್ಧ ಉಡುಪುಗಳು, ಯುವ ಸಮೂಹದ ಪ್ರಿಯವಾದ ರೆಡಿ ಟ್ಯಾಟ್ಯೂಗಳು ಹೆಚ್ಚಿನ ಆಕರ್ಷಣೆಗೊಳಗಾದವು.

ಮಿಕ್ಕಿಮೌಸ್, ಛೋಟಾಭೀಮ್, ಡೋನಾಲ್ಡ್ ಸೇರಿದಂತೆ ಮಕ್ಕಳ ಪ್ರಿಯವಾದ ಕಾರ್ಟನ್ ಕ್ಯಾರೆಕ್ಟರ್ ಗಳು ಜೀವಂತಿಕೆ ಪಡೆದಿದ್ದವು. ಇವುಗಳ ಮುಂದೆ ಸೆಲ್ಫಿ ತೆಗೆಸಿಕೊಳ್ಳಲು ಮಕ್ಕಳು ಸೇರಿದಂತೆ ದೊಡ್ಡವರು ಮುಗಿ ಬಿದ್ದಿದ್ದು ಕಂಡು ಬಂತು.

ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು ಪ್ರತಿ 500 ಮೀಟರ್ ಗೆ ಕುಡಿಯುವ ನೀರು ಹಾಗೂ ಡಸ್ಟ್ ಬಿನ್ ವ್ಯವಸ್ಥೆ ಮಾಡಲಾಗಿತ್ತು. ಈ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಡೊಳ್ಳು, ಕಂಸಾಳೆ, ಮರಗಾಲು ಗೊಂಬೆ ಮೊದಲಾದ ಜಾನಪದ ಕಲಾತಂಡಗಳ ಪ್ರದರ್ಶನ, ವಿದೇಶಿಗರ ಯೋಗ, ಸಂಗೀತ ಕಾರ್ಯಕ್ರಮ, ನೃತ್ಯ ಮೊದಲಾದವರು ಓಪನ್ ಸ್ಟ್ರೀಟ್ ಫೆಸ್ಟ್ ಗೆ  ಮೆರಗು ನೀಡಿದ್ದವು.

ಕಿಕ್ಕಿರಿದ್ದು ತುಂಬಿದ್ದ ಯುವ ಸಮೂಹವೂ ಸೆಲ್ಫಿಗೆ  ಮೊರೆ ಹೋದಂತೆ ಕಂಡ ಬಂದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಖುಷಿಯಿಂದ ಆಸ್ವಾಧಿಸಿದರು.  ವಿದೇಶಿಗರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಬೆಳಗಿನಿಂದಲೇ ಆರಂಭವಾದ ಹಲವಾರು ಕಾರ್ಯಕ್ರಮಗಳಿಗೆ ಮಧ‍್ಯಾಹ್ನದ ಮಳೆಯು ಕೊಂಚ ಅಡ್ಡಿಯುಂಟು ಮಾಡಿದಂತೆ ಕಂಡು ಬಂದರು ಮಳೆ ನಿಂತ ಮೇಲೆ ಯಾಥಾಸ್ಥಿತಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಠಿಸಿತು , ಬೃಹತ್ ಧ‍್ವನಿ ವರ್ಧಕದೊಂದಿಗೆ ಹೊಮ್ಮುತ್ತಿದ್ದ ಸಂಗೀತಕ್ಕೆ ಕಾಲುಗಳು ಹೆಜ್ಜೆ ಹಾಕಿದವು. ಚೈನಿಸ್ ಯೋಗವು ನೋಡುಗರನ್ನು ಸೆಳೆಯಿತು. ಕೇರಳದ ಕಲಾವಿದ ಸುನಿಲ್ ಲಿನಸ್ಕೋ ಡೇ ಮತ್ತು ತಂಡದವರು ತಮ್ಮ ವರ್ಣ ಚಿತ್ರದಲ್ಲಿ ಫೆಸ್ಟ್ ಅನ್ನು ಸೆರೆ ಹಿಡಿದರು.

ಮನೋರಂಜನೆ, ವಿನೋದ, ಕ್ರೀಡೆ, ಸ್ಪರ್ಧೆಗಳು ಸೇರಿದಂತೆ ಹಲವಾರು ಚಟುವಟಿಕೆಗಳ ತಾಣವಾಗಿ ಇಂದು ದೇವರಾಜ ಅರಸು ರಸ್ತೆ ಹೊರಹೊಮ್ಮಿತ್ತು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: