ಕರ್ನಾಟಕದೇಶ

ಜಿಎಸ್‍ಟಿ ಜಾರಿಗೆ ಕೇಂದ್ರ – ರಾಜ್ಯ ಸರ್ಕಾರಗಳ ಒಮ್ಮತ: ಸಂಸತ್ತಿನ ಅನುಮೋದನೆಯಷ್ಟೇ ಬಾಕಿ

ನವದೆಹಲಿ: ಜಿ.ಎಸ್.ಟಿ. ಜಾರಿ ಸಂಬಂಧ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ನಾಲ್ಕು ಹಂತದ ತೆರಿಗೆ ಸ್ವರೂಪಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಮ್ಮತದ ನಿರ್ಧಾರ ಕೈಗೊಂಡಿವೆ. ಈ ಮೂಲಕ ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ತಳೆದಂತಾಗಿದೆ.

ಹೊಸ ತೆರಿಗೆ ವ್ಯವಸ್ಥೆಯಡಿ ಆಹಾರ ಧಾನ್ಯಗಳು, ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯವಾದ ಹಲವಾರು ಸರಕುಗಳಿಗೆ ಗರಿಷ್ಟ ತೆರಿಗೆ ವಿನಾಯ್ತಿ ನೀಡಲಾಗಿದೆ. ಹಣದುಬ್ಬರ ತಡೆಯುವ ದೃಷ್ಟಿಯಿಂದ ನಾಲ್ಕು ಹಂತದ ತೆರಿಗೆ ಕಾರಣವಾಗಲಿರುವುದರಿಂದ, ನಾಲ್ಕು ಹಂತದ ತೆರಿಗೆ ವ್ಯವಸ್ಥೆ ಗೊಳಿಸಲು ನಿರ್ಧರಿಸಲಾಗಿದ್ದು, ಇದರಿಂದ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ತಗ್ಗಲಿದೆ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ವಿಲಾಸಿ ವಸ್ತುಗಳ ಮೇಲೆ ಮೇಲೆ ಗರಿಷ್ಠ ತೆರಿಗೆ ಮುಂದುವರೆಯಲಿದೆ.

ಶೇಕಡಾ 5, 12, 18 ಮತ್ತು ಶೇ. 28 – ಹೀಗೆ ನಾಲ್ಕು ಹಂತದ ತೆರಿಗೆ ವ್ಯವಸ್ಥೆ ಜಾರಿಗೊಳಿಸಲು ಉನ್ನತಾಧಿಕಾರ ಹೊಂದಿರುವ ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಗುರುವಾರ ನವದೆಹಲಿಯಲ್ಲಿ ನಡೆದ ಮಂಡಳಿಯ ಎರಡು ದಿನಗಳ ಸಭೆ, ಮೊದಲ ದಿನವೇ ಈ ತೆರಿಗೆ ಸ್ವರೂಪದ ಬಗ್ಗೆ ಸರ್ವಸಮ್ಮತದ ನಿರ್ಧಾರಕ್ಕೆ ಬಂದಿದ್ದು, 2017ರ ಏಪ್ರಿಲ್‌ ನಲ್ಲಿ ಹೊಸ ಹಣಕಾಸು ವರ್ಷದಿಂದ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಇದ್ದ ಪ್ರಮುಖ ಅಡ್ಡಿಯೊಂದು ತಾಂತ್ರಿಕವಾಗಿ ದೂರವಾದಂತಾಗಿದೆ. ಆದರೆ ಈ ಶಿಫಾರಸುಗಳು ಸಂಸತ್ತಿನಲ್ಲಿ ಸಮ್ಮತಿ ಮುದ್ರೆ ಪಡೆಯಬೇಕಿದೆ.

ತೆರಿಗೆ ದರವನ್ನು ಕನಿಷ್ಠ ಶೇ. 6 ರಿಂದ ಶೇ. 5 ಕ್ಕೆ ಇಳಿಸಿರುವುದರಿಂದ ಜನಸಾಮಾನ್ಯರ ಹಿತಾಸಕ್ತಿ ರಕ್ಷಣೆಯಾಗಲಿದೆ. ವಿಲಾಸಿ, ತಂಬಾಕು, ಪಾನ್‌ ಮಸಾಲ, ಸಿಗರೇಟ್‌, ಮದ್ಯದ ಮೇಲೆ ಗರಿಷ್ಠ  ತೆರಿಗೆ ಜತೆಗೆ ಹೆಚ್ಚುವರಿ ಸೆಸ್‌ ವಿಧಿಸಲೂ ಜಿಎಸ್‍ಟಿ ಮಂಡಳಿ ನಿರ್ಧರಿಸಿದೆ. ದುಬಾರಿ ಕಾರು, ತಂಪು ಪಾನೀಯಗಳೂ ಗರಿಷ್ಠ ಮಟ್ಟದ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಚಿನ್ನದ ಮೇಲೆ ಶೇಕಡಾ 4ರಷ್ಟು ತೆರಿಗೆ ವಿಧಿಸಲು ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ.

Leave a Reply

comments

Related Articles

error: