ಕರ್ನಾಟಕದೇಶಪ್ರಮುಖ ಸುದ್ದಿ

ವ್ಯವಸಾಯ, ಕೈಗಾರಿಕೆ ಮನುಷ್ಯನ ಎರಡು ಕಣ್ಣುಗಳು : ಎಂ.ವೆಂಕಯ್ಯನಾಯ್ಡು

ಬೆಂಗಳೂರು, ಸೆ.28 : ದೇಶ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ವೈಜ್ಞಾನಿಕವಾದ ವ್ಯವಸಾಯ ಹಾಗೂ ವ್ಯವಸ್ಥಿತವಾದ ಕೈಗಾರಿಕರಣ ಆಗಬೇಕು. ಇವುಗಳು ಮನುಷ್ಯನಿಗೆ ಎರಡು ಕಣ್ಣುಗಳು ಹೇಗೆ ಮುಖ್ಯವೋ ಅದೇ ರೀತಿ. ದೇಶದ ಸರ್ವೋತ್ತಮ ಅಭಿವೃದ್ಧಿಗೆ ವ್ಯವಸಾಯ ಮತ್ತು ಕೈಗಾರಿಕೆಗಳು ಅತಿ ಮುಖ್ಯ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜೊತೆ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ನಮ್ಮ ನಾಗರಿಕತೆಗೆ ತುಂಬಾ ಇತಿಹಾಸವಿದೆ. ನೀವು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಬೇಡಿ ಎಂದು ಹೇಳುವುದಿಲ್ಲ. ಆದರೆ ವಿದೇಶದಿಂದ ಬಂದ ನಂತರ ನಮ್ಮ ನೆಲದಲ್ಲಿ ಉತ್ತಮವಾದ ಸಾಧನೆ ಮಾಡಿ ದೇಶದ ಅಭಿವೃದ್ಧಿಗೆ ಪಣ ತೊಡಬೇಕು ಎಂದರು.

ಯಾರು ದೇಶದ ಅಭಿವೃದ್ಧಿಗೆ ದುಡಿಯುತ್ತಾರೋ ಅವರು ದೊಡ್ಡ ವ್ಯಕ್ತಿ ಆಗುತ್ತಾರೆ. ಯಾವುದೇ ಒಂದು ಕೆಲಸ ಉತ್ತಮ ಫಲಿತಾಂಶ ನೀಡಬೇಕಾದರೆ ಮಾನವನ ಭಾಗವಹಿಸುವಿಕೆ ಬಹಳ ಮುಖ್ಯ. ನೀವು ಸದ್ಯ ವಿದ್ಯಾರ್ಥಿಗಳಾಗಿದ್ದೀರಿ. ಮುಂದಿನ ದಿನಗಳಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಿದಾಗ ದೇಶದ ಬಗ್ಗೆ ಪ್ರೀತಿ ಇಟ್ಟುಕೊಂಡು ತಂಡ ತಂಡವಾಗಿ ಕೆಲಸ ನಿರ್ವಹಿಸಿದರೆ ಉತ್ತಮ ಫಲಿತಾಂಶ ಬರುತ್ತದೆ ಎಂದರು.

ನಮ್ಮ ದೇಶದಲ್ಲಿ ಹೆಚ್ಚು ಯುವ ಶಕ್ತಿಯ ಸಂಪನ್ಮೂಲವಿದೆ, ಜೀವನವೆ ಒಂದು ಸ್ವರ್ಧೆ, ನೀವು ಭವಿಷ್ಯದ ವಿಜ್ಞಾನದ ನಾಯಕರುಗಳು. ನಿಮ್ಮ ಕಲ್ಪನೆ ಯಾವ ರೀತಿ ಇರಬೇಕೆಂದರೆ ಒಂದು ಪ್ರದೇಶದಲ್ಲಿ ಸಾರ್ವಜನಿಕರು ವಾಸ ಮಾಡಲು ಯೋಗ್ಯವಾದ ರೀತಿ ಇರಬೇಕು. ಅಂದರೆ ಸ್ವಚ್ಛತೆ, ಉತ್ತಮ ಪರಿಸರ, ಯಾವುದೇ ರೀತಿಯ ಮಾಲಿನ್ಯ ರಹಿತವಾಗಿರಬೇಕು. ಇದೇ ಸ್ಮಾರ್ಟ್ ಸಿಟಿ ಕಾರ್ಯಕ್ರಮದ ಉದ್ದೇಶ ಎಂದರು.

ವಿದ್ಯಾರ್ಥಿಗಳು ಕನಸು ಕಾಣಬೇಕು. ಗುರಿ ಇರಬೇಕು. ಆದರೆ ಕನಸು ಗುರಿ ಮಾತ್ರ ಇದ್ದರೆ ಸಾಧ್ಯವಾಗುವುದಿಲ್ಲ. ಅದಕ್ಕೆ ಪೂರಕವಾದ ಶ್ರಮ ಮತ್ತು ಬುದ್ಧಿವಂತಿಕೆ ಮುಖ್ಯ ಎಂದು ಉಪರಾಷ್ಟ್ರಪತಿ ಅವರು ತಮ್ಮದೇ ಆದ ಒಂದು ಉದಾಹರಣೆ ನೀಡಿದರು. ನಾನು ಒಬ್ಬ ರೈತ ಕುಟುಂಬದಿಂದ ಸಾಮಾನ್ಯ ವರ್ಗದಿಂದ ಬಂದಂತ ವ್ಯಕ್ತಿ. ನನ್ನ ಶ್ರಮದಿಂದ ಇಂದು ನಿಮ್ಮ ಮುಂದೆ ಭಾರತ ದೇಶದ ಉಪರಾಷ್ಟ್ರಪತಿಯಾಗಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ಸಮಾಜಕ್ಕೆ ನೀವು ಏನೂ ಕೊಡುಗೆ ನೀಡದಿದ್ದರೂ ಸಮಾಜ ನಿಮಗೆ ನೀವು ನಿರೀಕ್ಷಿಸಿದಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಆದರೆ ಆ ರೀತಿ ಮಾಡದೆ ಸಮಾಜಕ್ಕೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಲ್ಪ ಕೊಡುಗೆಯನ್ನಾದರೂ ನೀಡಿದರೆ ದೇಶ ಬಹಳ ಬೇಗವಾಗಿ ಅಭಿವೃದ್ಧಿಯಾಗುತ್ತದೆ ಎಂದರು. ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ತಲುಪಬೇಕು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲ, ರಾಜ್ಯ ಸರ್ಕಾರದ ಗೃಹ ಸಚಿವ ರಾಮಲಿಂಗಾರೆಡ್ಡಿ, ಐ.ಐ.ಎಸ್. ನ ನಿರ್ದೇಶಕ ಅನುರಾಗ್ ಕುಮಾರ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: