ಮೈಸೂರು

ನಂದೀಧ್ವಜಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಮೈಸೂರು,ಸೆ.30:- ನಾಡಿನ ಸಂಸ್ಕೃತಿ, ಸಂಪ್ರದಾಯ, ಇತಿಹಾಸವನ್ನು ಬಿಂಬಿಸುವ ಹಾಗೂ ಏಕತೆಯ ಪ್ರತೀಕವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಪ್ರವಾಸಿಗರು ಸಾಕ್ಷಿಯಾದರು.

ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯನ್ನು ಲಕ್ಷಾಂತರ ಪ್ರವಾಸಿಗರು ಕಣ್ತುಂಬಿಕೊಂಡರು. ಶನಿವಾರ ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಜಂಬೂಸವಾರಿಯಲ್ಲಿ ಸತತ 6ನೇ ಬಾರಿ 750 ಕೆಜಿ  ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನ ರಾಜ ಗಾಂಭೀರ್ಯದಿಂದ ಹೆಜ್ಜೆಹಾಕಿದ. ಕುಮ್ಕಿ ಆನೆಗಳಾದ ಕಾವೇರಿ, ವರಲಕ್ಷ್ಮೀ -ಅರ್ಜುನನಿಗೆ ಸಾಥ್ ನೀಡಿದವು. ಅರ್ಜುನನ ನಾಯಕತ್ವದಲ್ಲಿ ಬಲರಾಮ, ವಿಕ್ರಮ, ವಿಜಯ, ಗಜೇಂದ್ರ, ಭೀಮ, ದ್ರೋಣ, ಹರ್ಷ, ಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಶಾಂತ ಆನೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು.

ಮೆರವಣಿಗೆಯಲ್ಲಿ 40 ಕಲಾ ತಂಡಗಳು, 40 ಸ್ತಬ್ಧಚಿತ್ರಗಳು, ಅಶ್ವಾರೋಹಿದಳ,  ಪೊಲೀಸ್ ಪಡೆ, ಸಾಲಂಕೃತ ನಿಶಾನೆ ಆನೆಗಳು ಭಾಗವಹಿಸಿದ್ದವು.  ಚಿನ್ನದ ಅಂಬಾರಿ ಹೊತ್ತ ಅರ್ಜುನ ಅರಮನೆ ಆವರಣದಲ್ಲಿರುವ ಗಜ ಶಾಲೆಯಿಂದ ಕುಮ್ಕಿ ಆನೆಗಳಾದ ಕಾವೇರಿ, ವಿಜಯಲಕ್ಷ್ಮಿ ಅನೆಗಳೊಂದಿಗೆ ಆಗಮಿಸಿ ಅಂಬಾವಿಲಾಸ ಅರಮನೆ ಮುಂಭಾಗದ ವಿಶೇಷ ವೇದಿಕೆ ಬಳಿ ಬಂದು ನಿಲ್ಲುತ್ತಿದ್ದಂತೆ ಕುಶಾಲು ತೋಪುಗಳನ್ನು ಹಾರಿಸಲಾಯಿತು. ಅಶ್ವಾರೋಹಿ ದಳ, ಪೊಲೀಸ್ ರಕ್ಷಣಾ ದಳ ಕೆಎಸ್ಆರ್ ಪಿ, ನಗರ ಸಶಸ್ತ್ರ ಮೀಸಲು ದಳ ಪಥಸಂಚಲನ ನಡೆಸಿ ವಂದನೆ ಸಲ್ಲಿಸಿದರು.

ಇನ್ನು ಮಹಾಪೌರ ಎಂ.ಜೆ.ರವಿಕುಮಾರ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್ ಕುದುರೆ ಸವಾರಿ ಮಾಡಿದರು. (ಎಂ.ಎನ್,ಎಸ್.ಎಚ್)

Leave a Reply

comments

Related Articles

error: