ಮೈಸೂರು

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ವೃದ್ಧ ಶಿವಣ್ಣ : ಜಿಲ್ಲಾಡಳಿತ ಗುರುತಿಸುವಂತಾಗಲಿ ಸ್ಥಳೀಯರ ಒತ್ತಾಸೆ

ಮೈಸೂರು(ಪಿರಿಯಾಪಟ್ಟಣ)ಅ.1:- ಇಲ್ಲಿನ ವೃದ್ಧರೊಬ್ಬರು ಹಲವು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸ ಗುಡಿಸುತ್ತ ಸೇವಾ ಮನೋಭಾವದಿಂದ ಶ್ರಮಿಸುತ್ತ ಗಮನ ಸೆಳೆದಿದ್ದಾರೆ.

ಜೀವನದ ಮುಸ್ಸಂಜೆಯಲ್ಲಿರುವ ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಮದ 67 ವರ್ಷದ  ಶಿವಣ್ಣ ಬಸ್ ನಿಲ್ದಾಣ, ಸರ್ಕಾರಿ ಶಾಲೆಯ ಆವರಣ, ಗ್ರಾಮದ ಪ್ರಮುಖ ರಸ್ತೆಯ ಕಸ ಗುಡಿಸುವುದರಲ್ಲಿಯೇ ಜೀವನ ಸವೆಸಿದ್ದಾರೆ. ದಿನದಲ್ಲಿ ಸಮಯ ಸಿಕ್ಕ ವೇಳೆ ಕಸ ಗುಡಿಸುವ ಕಾಯಕದಲ್ಲಿ ತೊಡುಗುವ ಅವರು, ಯಾರಿಂದಲೂ ಒಂದು ಪೈಸೆ ಕೂಡ ಪಡೆಯದೇ ಸಮಾಜಮುಖಿ ಕೆಲಸ ಮಾಡುತ್ತ ಮಾದರಿಯಾಗಿದ್ದಾರೆ. ಯಾವುದೇ ಪ್ರತಿಷ್ಠೆ ಇಲ್ಲದೇ ಸಾರ್ವಜನಿಕ ಬಸ್ ನಿಲ್ದಾಣ, ಹಾಗೂ ಬೀದಿಗಳಲ್ಲಿ ಸಂಚರಿಸಿ ಕಸಗುಡಿಸುತ್ತಿರುವ ಸೇವಾಜೀವಿಯನ್ನು ಕಂಡರೆ ಎಂತಹವರಲ್ಲಿಯೂ ಧನ್ಯತಾಭಾವ ಮೂಡುತ್ತದೆ.

ತಮ್ಮ ಸ್ವಂತ ಖರ್ಚಿನಲ್ಲಿ ಪೊರಕೆ ಖರೀದಿಸಿ ತಂದು ಬಸ್ ನಿಲ್ದಾಣದಲ್ಲಿ ಕಸಗೂಡಿಸುವ ಸೇವೆಯಲ್ಲಿಯೇ ಜೀವನದ ಸಂತೃಪ್ತಿ ಕಂಡಿದ್ದಾರೆ. ಕಳೆದ 5 ವರ್ಷಗಳ ಕಾಲ ದಣಿವರಿಯದ ಸೇವೆ ಸಲ್ಲಿಸುತ್ತ ಗ್ರಾಮದಲ್ಲಿ ಮನೆ ಮಾತಾಗಿದ್ದಾರೆ. ನೀವು ಯಾಕೆ ಕಸ ಗುಡಿಸುತ್ತೀರಿ ಎಂದು ಕೇಳಿದರೆ “ನಮ್ಮ ಸುತ್ತಮುತ್ತಲಿನ ಹಾದಿ ಬೀದಿ ಸಾರ್ವಜನಿಕ ಸ್ಥಳಗಳು ಸ್ವಚ್ಛಾವಾಗಿರಬೇಕು ಸ್ವಚ್ಛತೆ ಜೀವನದ ಉಸಿರಾಗಬೇಕು. ಹೀಗಾಗಿ ನಾನು ಕಸ ಗುಡಿಸುವುದರಲ್ಲಿಯೇ ತೃಪ್ತಿ ಕಂಡುಕೊಂಡಿದ್ದೇನೆ” ಎನ್ನುವ ಅವರು, ಇದಕ್ಕೆ ಯಾರು ಪ್ರೇರಣೆ ಎಂದರೆ ನನ್ನ ಪತ್ನಿ ಜಯಮ್ಮನೊಂದಿಗೆ ದೇವರ ಆಶೀರ್ವಾದ ಎನ್ನುತ್ತಾರೆ, ನನಗೀಗ 55 ವರ್ಷ ನಾನು ಹುಣಸವಾಡಿ ಗ್ರಾಮದ ಸಮೀಪವಿರುವ ಪುನಾಡಹಳ್ಳಿ ಗ್ರಾಮದಲ್ಲಿ ವ್ಯವಸಯಗಾರನಾಗಿದ್ದು ಕಳೆದ 5 ವರ್ಷದಿಂದ ಹುಣಸವಾಡಿ ಗ್ರಾಮದಲ್ಲಿ ಗೊಬ್ಬರದ ಅಂಗಡಿಯನ್ನು ಇಟ್ಟಿದ್ದೇನೆ. ದಿನನಿತ್ಯ ಅವರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಗುಡಿಸುತ್ತಿರುವುದನ್ನು ಕಂಡಿದ್ದೇನೆ, ಅವರು ಅಪರೂಪದ ವ್ಯಕ್ತಿ ಎನ್ನುತ್ತಾರೆ ಗೋವಿಂದೆಗೌಡರು.

ಕಸ ಗೂಡಿಸುವ ಹವ್ಯಾಸ ಬೆಳೆಸಿಕೊಂಡು ಇಳಿವಯಸ್ಸಿನಲ್ಲಿ ಅನಾರೋಗ್ಯದ ನಡುವೆಯೂ ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದ್ದು ಮೆಚ್ಚುವಂತಹದ್ದಾಗಿದೆ, ಸ್ವಚ್ಛ ಭಾರತ ಅಭಿಯಾನಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರ ಇಂತಹ ಅಪರೂಪದ ವ್ಯಕ್ತಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರೆ  ಸಮಾಜಕ್ಕೆ ಅತ್ಯುತ್ತಮ ಸಂದೇಶ ಹೋಗುತ್ತದೆ ಎನ್ನುತ್ತಾರೆ ನಿವೃತ್ತ ಶಿಕ್ಷಕರಾದ ಸ್ವಾಮಿಗೌಡ.

ಮಹಾತ್ಮ ಗಾಂಧಿ ಜನ್ಮದಿನ ಅ.2 ಬಂದಾಗೊಮ್ಮೆ ಸ್ವಚ್ಛತೆಗೆ ಮಹತ್ವ ನೀಡಲಾಗುತ್ತದೆ. ಆದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಚ್ಛತೆಗೆ  ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಹುಣಸವಾಡಿ ಗ್ರಾಮದ  ಶಿವಣ್ಣರವರನ್ನು ಜಿಲ್ಲಾ ಆಡಳಿತ ಗುರುತಿಸಬೇಕೆಂಬುದು ಎಂಬುದು ಸ್ಥಳೀಯರ ಸ್ಥಳೀಯರ ಒತ್ತಾಸೆಯಾಗಿದೆ. (ಆರ್.ಬಿ.ಆರ್ , ಎಸ್.ಎಚ್)

Leave a Reply

comments

Related Articles

error: