ಕರ್ನಾಟಕಪ್ರಮುಖ ಸುದ್ದಿ

ಪ್ರೀತಿಸಿದ ಜೋಡಿಗಳಿಗಿನ್ನು ನೊ ಟೆನ್ಶನ್‍ : ಆನ್‍ಲೈನ್‍ನಲ್ಲೇ ಮದುವೆ ನೋಂದಣಿಗೆ ಸರ್ಕಾರ ಅವಕಾಶ

ಬೆಂಗಳೂರು, ಅ.2 : ಪ್ರೀತಿಸಿ ಮದುವೆಯಾದವರು ಇನ್ನು ಹೇಗಪ್ಪಾ ಮದುವೆ ನೋಂದಣಿ ಮಾಡಿಸುವುದು ಎಂದು ಚಿಂತೆಪಡಬೇಕಿಲ್ಲ. ಏಕೆಂದರೆ ಇನ್ನು ಮುಂದೆ ವಿವಾಹ ನೋಂದಣಿ ಮಾಡಿಸಿಕೊಳ್ಳುವ ನವದಂಪತಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಹುದು. ಹೀಗಾಗಿ ಉಪನೋಂದಣಾಧಿಕಾರಿಗಳ ಕಚೇರಿಗೆ ಎಡತಾಕುವ ಪ್ರಮೇಯವೇ ಎದುರಾಗುವುದಿಲ್ಲ.

ರಾಜ್ಯ ಸರ್ಕಾರ ಇನ್ನು ಮುಂದೆ ಆನ್‍ಲೈನ್ ಮೂಲಕವೇ ವಿವಾಹ ನೋಂದಣಿಗೆ ಅವಕಾಶ ಮಾಡಲಿದ್ದು, ವಧೂ-ವರರ ಯಾವುದಾದರೊಂದು ಗುರುತಿನ ಚೀಟಿ ನೀಡಿದರೆ ಸಾಕು. ಆನ್‍ಲೈನ್‍ನಲ್ಲಿ ಮದುವೆ ನೋಂದಣಿಯಾಗಿ ನಿಮ್ಮ ಮನೆ ಬಾಗಿಲಿಗೆ ನೋಂದಣಿ ಪತ್ರ ತಲುಪುತ್ತದೆ. ಪ್ರಾರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಮಾತ್ರ ಇದು ಆರಂಭವಾಗಲಿದ್ದು, ಈ ವರ್ಷಾಂತ್ಯಕ್ಕೆ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

ಕರ್ನಾಟಕ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಸಾರ್ವಜನಿಕರಿಗೆ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವ ಸದುದ್ದೇಶದಿಂದ ಆನ್‍ಲೈನ್ ಮೂಲಕ ವಿವಾಹ ನೋಂದಣಿ ಮಾಡಲು ನಿರ್ಧರಿಸಿದ್ದು, ಸಾರ್ವಜನಿಕರು ಸರ್ಕಾರದ ಯಾವುದಾದರು ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕುವ ಮಾದರಿಯಲ್ಲೇ ಆನ್‍ಲೈನ್‍ನಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದರೆ 3-4 ದಿನದೊಳಗೆ ನಿಮ್ಮ ಮನೆ ಬಾಗಿಲಿಗೆ ನೋಂದಣಿ ಪತ್ರ ತಲುಪಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಧೂ-ವರರು ಕಡ್ಡಾಯವಾಗಿ ಸಬ್‍ರಿಜಿಸ್ಟ್ರಾರ್ ಇಲ್ಲವೇ ತಹಸೀಲ್ದಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಕಾನೂನು ಆಯೋಗ ನಿರ್ದೇಶನ ನೀಡಿತ್ತು. ಭವಿಷ್ಯದಲ್ಲಿ ಉಂಟಾಗಬಹುದಾದ ತೊಂದರೆಯಿಂದ ಪಾರಾಗಲು ಇದು ಅನುಕೂಲವಾಗಲಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಆದರೆ ವಿವಾಹ ನೋಂದಣಿ ಪತ್ರ ನೀಡಲು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾಕ್ಷಿಗಳ ಹಾಜರಾತಿ ಸೇರಿದಂತೆ ಒಂದಿಲ್ಲೊಂದು ನೆಪ ಹೇಳುತ್ತಿದ್ದುದರಿಂದ ಭಾರೀ ವಿಳಂಬವಾಗುತ್ತಿತ್ತು.

ಪ್ರೀತಿಸಿ ಮದುವೆಯಾದವರಿಗಂತೂ ಇದರಿಂದ ಭಾರೀ ಕಿರಿಕಿಯಾಗುತ್ತಿತ್ತು. ಇದೀಗ ಮುದ್ರಾಂಕ ಇಲಾಖೆ ಅನ್‍ಲೈನ್‍ನಲ್ಲೇ ವಧು-ವರರು ಅರ್ಜಿ ಸಲ್ಲಿಸಿದರೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. ಇದಕ್ಕಾಗಿ ವಧೂ-ವರರು ಆಧಾರ್‍ಕಾರ್ಡ್, ಗುರುತಿನ ಚೀಟಿ, ಚಾಲನಾ ಪರವಾನಗಿ(ಡಿಎಲ್) ಸೇರಿದಂತೆ ಇಬ್ಬರು ಸಾಕ್ಷಿದಾರರ ಹೆಸರು ಸೂಚಿಸಿದರೆ ಸಾಕು ಆನ್‍ಲೈನ್‍ ಮೂಲಕ ವಿವಾಹ ನೋಂದಣಿ ಖಚಿತವಾಗುತ್ತದೆ.

ಮೊದಲು ಬೆಂಗಳೂರಿನ ಎಲ್ಲ ಸಬ್‍ರಿಜಿಸ್ಟ್ರರ್ ಕಚೇರಿಗಳಲ್ಲಿ ಈ ವ್ಯವ‍ಸ್ಥೆ ಜಾರಿಗೆ ಬರಲಿದ್ದು, ಈ ವರ್ಷದ ಡಿಸೆಂಬರ್ 31ರೊಳಗೆ ರಾಜ್ಯಾದ್ಯಾಂತ ಜಾರಿಗೆ ತರಲಾಗುವುದು ಎಂದು ತಿಳಿದುಬಂದಿದೆ.

(ಎನ್.ಬಿ)

Leave a Reply

comments

Related Articles

error: