ಪ್ರಮುಖ ಸುದ್ದಿ

ತಾಳ್ಮೆ, ಶ್ರಮದಿಂದ ಮಾತ್ರ ಕಲೆ ಒಲಿಯಲು ಸಾಧ್ಯ: ಕೃಷ್ಣಪ್ಪ

ಪ್ರಮುಖ ಸುದ್ದಿ, ಮಂಡ್ಯ, ಅ.೨: ಯಾವುದೇ ಕಲೆಯನ್ನು ಕಲಿಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಕಷ್ಟಪಡಬೇಕು. ತಾಳ್ಮೆ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ೨೨ರ ಸಂಭ್ರಮದ ಗುರುದೇವೋತ್ಸವ-೨೦೧೭ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಶ್ರಮ, ತಾಳ್ಮೆ, ಆಸಕ್ತಿ ಇದ್ದರೆ ಕಲೆ ಎಲ್ಲರಿಗೂ ಒಲಿಯುತ್ತದೆ. ಭರತನಾಟ್ಯವೂ ಅಷ್ಟೆ. ಇದಕ್ಕಾಗಿ ನಾಟ್ಯವನ್ನೇ ಧ್ಯಾನಿಸಬೇಕು ಎಂದು ಕರೆ ನೀಡಿದರು.
ಭರತನಾಟ್ಯ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಒಂದು ಅದ್ಭುತ ಕಲೆ. ಭರತನಾಟ್ಯ ಎಂದಾಕ್ಷಣ ಕೇವಲ ಹೆಣ್ಣು ಮಕ್ಕಳು ಕಲಿಯುವಂತಹುದು ಎಂಬ ಮನೋಭಾವವಿದೆ. ಆದರಿದು ತಪ್ಪು. ಗಂಡು ಮಕ್ಕಳಿಗೂ ಸಹ ಒಲಿಯುವ ಕಲೆ ಇದಾಗಿದೆ. ಸಾಕ್ಷಾತ್ ಪರಶಿವನೇ ನಟರಾಜನಾಗಿ ಭರತನಾಟ್ಯವನ್ನು ಪ್ರತಿನಿಧಿಸುತ್ತಾನೆ ಎಂದು ಹೇಳಿದರು.
ನಗರದ ಕಲಾಮಂದಿರವನ್ನು ಪದೇ ಪದೇ ದುರಸ್ತಿಗೊಳಿಸಲಾಗುತ್ತಿದೆ. ಈಗ ನಡೆಯುತ್ತಿರುವ ದುರಸ್ತಿಯಿಂದ ೧೦ ವರ್ಷ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಒತ್ತಾಯಿಸಿದಾಗ ಅದಕ್ಕೆ ಸ್ಪಂದಿಸಿದ ಸಚಿವ ಕೃಷ್ಣಪ್ಪ, ಕಲಾಮಂದಿರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜತೆಗೆ, ಅಂಬೇಢ್ಕರ್ ಭವನವೂ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಮಾನಸಿಕ ಮತ್ತು ಲೈಂಗಿಕ ರೋಗಗಳ ತಜ್ಞ ಡಾ.ಟಿ.ಎಸ್.ಸತ್ಯನಾರಾಯಣರಾವ್ ಅವರಿಗೆ ಗುರುದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಉದ್ಯಮಿ ಪಿ.ರವಿಕುಮಾರ್‌ಗೌಡ ಗಣಿಗ, ಅಕಾಡೆಮಿಯ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ, ಕದಂಬ ಸೇನೆ ಸಂಘಟನೆಯ ಅಧ್ಯಕ್ಷ ಬೇಕ್ರಿ ರಮೇಶ್, ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ, ನಗರಸಭೆ ಸದಸ್ಯ ಎಸ್.ಕೆ.ಶಿವಪ್ರಕಾಶ್‌ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎ)

 

Leave a Reply

comments

Related Articles

error: