ಮೈಸೂರು

ಚಂದನ ಪ್ರಶಸ್ತಿಗೆ ಮೈಮ್ ರಮೇಶ್ ಆಯ್ಕೆ: ಪ್ರಶಸ್ತಿ ನಮ್ಮನ್ನು ಹುಡುಕಿ ಬರಬೇಕು ರಮೇಶ್ ಮನದಾಳದ ಮಾತು

ಕಲಾವಿದರಾಗುವುದು ಸುಲಭದ ಮಾತಲ್ಲ. ಕಲಾಸೇವೆಯಲ್ಲಿ ತೊಡಗಿಸಿಕೊಳ್ಳಲು ತಾಳ್ಮೆ-ಜಾಣ್ಮೆ ಎರಡೂ ಬೇಕು. ಹಾಗಿದ್ದಾಗ ಮಾತ್ರ ನಿರ್ದಿಷ್ಟ ಗುರಿಯನ್ನು ತಲುಪುವುದಕ್ಕೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ರಂಗಭೂಮಿ ನಿರ್ದೇಶಕ ಮೈಮ್ ರಮೇಶ್.

ಈಗ ಅವರ ವಿಷಯವನ್ನು ಹೇಳಲೇಬೇಕು ಯಾಕೆಂದರೆ ದೂರದರ್ಶನ ಚಂದನವು ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಮಂದಿ ಸಾಧಕರಿಗೆ ಚಂದನ ಪ್ರಶಸ್ತಿಯನ್ನು ನವೆಂಬರ್ 6 ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಿದ್ದು, ಮೈಸೂರಿನ ನಾಟಕ ನಿರ್ದೇಶಕ ಮೈಮ್ ರಮೇಶ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಯುವಕರನ್ನು ಸದಾ ರಂಗಭೂಮಿಯತ್ತ ಸೆಳೆಯುವ ತುಡಿತ ಹೊಂದಿರುವ ಮೈಮ್ ರಮೇಶ್ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು. ಮಂಗಳೂರು ಮೂಲದ ಇವರನ್ನು ಸಾಂಸ್ಕೃತಿಕ ನಗರಿ ಮೈಸೂರು ತನ್ನತ್ತ ಸೆಳೆಯಿತು. ಅವರು ಕೇವಲ ನಾಟಕ ನಿರ್ದೇಶಕರಷ್ಟೇ ಅಲ್ಲ. ನೃತ್ಯ ಸಂಯೋಜಕರೂ, ಸಂಗೀತ ಸಂಯೋಜಕರೂ ಆಗಿದ್ದಾರೆ. ಭಾರತದ ಶ್ರೇಷ್ಠ ನಿರ್ದೇಶಕರೊಡನೆ ಕೆಲಸ ಮಾಡಿದ ಅನುಭವದ ಜೊತೆ ಪಶ್ಚಿಮ ಬಂಗಾಳದ ಬಾದಲ್ ಸರ್ಕಾರ್ ಅವರೊಡನೆ ಮೂರನೇ ರಂಗಭೂಮಿಯಲ್ಲಿ ದುಡಿದವರು. ಸಿಟಿಟುಡೆಯೊಂದಿಗೆ ಅವರು ಪ್ರಶಸ್ತಿ ಸಿಕ್ಕಿದ ಸಂದರ್ಭ ತಮ್ಮ ಖುಷಿಯನ್ನು ಹಂಚಿಕೊಳ್ಳುವುದರ ಜೊತೆ ಮಾತಿಗಿಳಿದರು.

ನೀವು ಈ ಕ್ಷೇತ್ರಕ್ಕೆ  ಬರಲು ಕಾರಣ..?

ನನಗೆ ಬಾಲ್ಯದಿಂದಲೂ ಕಲೆಯಲ್ಲಿ ವಿಪರೀತ ಆಸಕ್ತಿ. ಮೊದಲು ಯಕ್ಷಗಾನ ಕಲಿತು ಅದರಲ್ಲಿ ತೊಡಗಿಸಿಕೊಂಡಿದ್ದೆ. ನಂತರ ಭರತನಾಟ್ಯವನ್ನೂ ಕಲಿತೆ. 1975ರಲ್ಲಿಯೇ ನಾಟಕ, ರಂಗಭೂಮಿ ಸಮುದಾಯವನ್ನು ಸೇರಿದೆ. ಇದೀಗ ನಾನು ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು 46 ವರ್ಷವಾಯಿತು. 30 ವರ್ಷಗಳ ಕಾಲ ಮಕ್ಕಳ ರಂಗಭೂಮಿಯಲ್ಲಿ ಕಲಾವಿದನಾಗಿ ತೊಡಗಿಸಿಕೊಂಡಿದ್ದೆ. 1989ರಲ್ಲಿ ಮೈಸೂರು ರಂಗಾಯಣದಲ್ಲಿ ತೊಡಗಿಸಿಕೊಂಡೆ. ಶಿಕ್ಷಕ, ಕಲಾವಿದ, ನಿರ್ದೇಶಕನಾಗಿ ಸೇವೆ ಸಲ್ಲಿಸಿದೆ. ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸಿದ್ದು,  ಕರ್ನಾಟಕದಲ್ಲಿ ಏಳು ತಂಡವನ್ನು ಕಟ್ಟಿದೆ. ಮೈಸೂರಿನಲ್ಲಿ ಜಿಪಿಐಇಆರ್ ಹವ್ಯಾಸಿ ರಂಗತಂಡ ಕಟ್ಟಿದೆ. ಅದರಲ್ಲಿ ತೊಡಗಿಸಿಕೊಂಡೆ. ಹಲವು ಕಡೆ ಕಾರ್ಯಾಗಾರವನ್ನೂ ನಡೆಸಿಕೊಟ್ಟಿದ್ದೇನೆ.

ನಿಮ್ಮ ಗರಡಿಯಲ್ಲಿ ಪಳಗಿದವರು..?

ಲೆಕ್ಕವಿಲ್ಲದಷ್ಟು ಮಂದಿ. ಎಲ್ಲರೂ ಉತ್ತಮ ಸಾಧನೆ ಗೈದಿದ್ದಾರೆ. ಕೆಲವರು ಕಿರುತೆರೆಯಲ್ಲಿ ಕಾಣಿಸಿಕೊಂಡರೆ, ಇನ್ಕೆಲವರು ಚಲನಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಿಧಿ ಸುಬ್ಬಯ್ಯ ನಾಯಕಿ ನಟಿಯಾಗಿ, ಧ್ರುವ ಸರ್ಜಾ, ಧನಂಜಯ್ ನಾಯಕ ನಟರಾಗಿ ಹೊರಹೊಮ್ಮಿದ್ದಾರೆ.

ನಿಮ್ಮ ನಿರ್ದೇಶನದ ನಾಟಕ ರಾಷ್ಟ್ರೀಯ ನಾಟಕೋತ್ಸವದಲ್ಲಿ..?

ಮುಂಬೈನಲ್ಲಿ ನಡೆದ ‘ಇಪ್ಪಾಲದವರು’ ನಾಟಕ ಪ್ರಥಮ ಪ್ರಶಸ್ತಿಯನ್ನು ಪಡೆದಿದೆ. ರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಪ್ರಶಸ್ತಿಗಳು ದೊರಕಿವೆ.

ನಿಮಗೆ ಸಂದ ಪ್ರಶಸ್ತಿ..?

ಚೆನ್ನೈನಿಂದ ಸೌತ್ ಇಂಡಿಯನ್ ಫಿಲ್ಮ್ ಅಸೋಸಿಯೇಶನ್ ನಿಂದ 1997ರಲ್ಲಿ  ಕಲೈ ಸೆಲ್ವಂ ಬಿರುದು, ಕೇರಳ ಕಾಸರಗೋಡಿನಲ್ಲಿ ಕಡಲತಡಿಯ ಭಾರ್ಗವ ಶಿವರಾಮಕಾರಂತರಿಂದ ರಂಗಕರ್ಮಿ ಬಿರುದು. ನಾನು ಅರ್ಜಿ ಹಾಕಿ ಪ್ರಶಸ್ತಿ ಪಡೆಯೋದನ್ನು ವಿರೋಧಿಸುತ್ತೇನೆ. ನಿಜವಾಗಿ ನಮ್ಮಲ್ಲಿರುವ ಕಲೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಬೇಕು. ಆಗ ನಿಜವಾದ ಗೌರವ ದೊರಕಿದಂತಾಗುತ್ತದೆ. ಆದರೆ ಅರ್ಜಿ ಹಾಕಿ ಪಡೆದ ಪ್ರಶಸ್ತಿಗೆ ಯಾವ ಮೌಲ್ಯವೂ ಇಲ್ಲ. ಪ್ರಶಸ್ತಿ ನಮ್ಮನ್ನು ಹುಡುಕಿ ಬರಬೇಕೇ ಹೊರತು ನಾವು ಪ್ರಶಸ್ತಿಯನ್ನರಸಿ ಹೋಗಬಾರದು.

ಚಲನಚಿತ್ರದತ್ತ ಒಲವು..?

ತುಂಬಾ ಮಂದಿ ಬನ್ನಿ. ಚಲನಚಿತ್ರರಂಗದಲ್ಲೂ ಗುರುತಿಸಿಕೊಳ್ಳಿ ಅಂತ ಹೇಳಿದ್ದರು. ಆದರೆ ನನಗೆ ಆಸಕ್ತಿ ಇಲ್ಲ. ಚಲನಚಿತ್ರ ಜನರನ್ನು ಉದ್ರೇಕಗೊಳಿಸುತ್ತದೆ. ಆದರೆ ರಂಗಭೂಮಿ, ನಾಟಕ ಜನರಿಗೆ ತಿಳುವಳಿಕೆ ನೀಡುತ್ತದೆ.

ಪ್ರಶಸ್ತಿಗೆ ಖುಷಿ..?

ತುಂಬಾನೇ ಖುಷಿ ಆಗ್ತಾ ಇದೆ. ಚಂದನ ಪ್ರಶಸ್ತಿ ನನ್ನನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಟ್ಟಿದೆ. ಕಲಾ ಜಗತ್ತಿನಲ್ಲಿ ನನಗೆ ಇನ್ನಷ್ಟು ಜವಾಬ್ದಾರಿಗಳಿವೆ ಎಂಬುದನ್ನು ತಿಳಿಸಿ, ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಯುವಜನತೆಗೆ ಕಿವಿ ಮಾತು..?

ಸಂಸ್ಕೃತಿ-ಸಂಸ್ಕಾರವನ್ನು ಇನ್ನಷ್ಟು ತಿಳಿದುಕೊಳ್ಳಬೇಕು. ರಂಗಭೂಮಿ ಉಳಿಯಲು ಹೆಚ್ಚೆಚ್ಚು ಜನರು ಇದರಲ್ಲಿ ತೊಡಗಿಸಿಕೊಳ್ಳಬೇಕು. ಹಾಗಿದ್ದಾಗ ರಂಗಭೂಮಿ ಉಳಿಯಲು ಸಾಧ್ಯ.

ಮೂಕಾಭಿನಯಗಳಲ್ಲಿ ತೊಡಗಿಸಿಕೊಂಡು ಮೂಕಾಭಿನಯ ಪಟು ಎನಿಸಿಕೊಂಡ ಮೈಮ್ ರಮೇಶ್ ತಮ್ಮದೇ ಹಾದಿಯಲ್ಲಿ ದಿಟ್ಟ ಹೆಜ್ಜೆಯಿರಿಸಿ ಅಪ್ರತಿಮ ಸಾಧನೆಗೈಯ್ಯುತ್ತಿದ್ದಾರೆ.  ಕಲೈ ಸೆಲ್ವಂ ಬಿರುದನ್ನು ಪಡೆದ ಏಕೈಕ ಕನ್ನಡಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆ ಹೀಗೆ ನಿರಂತರವಾಗಿದ್ದು, ಇನ್ನಷ್ಟು ಪ್ರಶಸ್ತಿಗಳು ಅವರನ್ನು ಅರಸಿ ಬರಲಿ.

~ ಸುಹಾಸಿನಿ ಹೆಗಡೆ

Leave a Reply

comments

Related Articles

error: