ಕರ್ನಾಟಕಮೈಸೂರು

ಗಾಂಧೀಜಿ ಈ ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿ : ಸಾಹಿತಿ ಶ್ರಿನಿವಾಸ್ ಶೆಟ್ಟಿ

ಮಂಡ್ಯ. ಅ.2: ಗಾಂಧೀಜಿ ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಸಾಹಿತಿ ಶ್ರೀನಿವಾಸ್ ಶೆಟ್ಟಿ ಅವರು ತಿಳಿಸಿದರು.

ಅವರು ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಹಾಗೂ ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ ಕಲಾಮಂದಿರದಲ್ಲಿ ನಡೆದ ಮಹಾತ್ಮ ಗಾಂಧೀ ಜಯಂತಿ ಮತ್ತು ಲಾಲ್ ಬಹೂದ್ದೂರ ಶಾಸ್ತ್ರಿಯವರ ಜಯಂತಿ ಹಾಗೂ ಮಾತೃಪೂರ್ಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗಾಂಧೀಜಿ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮಾನವತಾವಾದಿ, ಸಮಾಜ ಸುಧಾರಕ, ದೀನಬಂಧು, ಪರ್ತಕರ್ತ ಹಾಗೂ ಗ್ರಾಮ ಸ್ವರಾಜ್ಯದ ಹರಿಕಾರರಾದ ಇವರನ್ನು ಯಾವ ಕೋನದಿಂದ ನೋಡಿದರೂ ಅವರಿಗೆ ಅವರೇ ಸಾಟಿಯಾಗಿದ್ದರು ಎಂದು ತಿಳಿಸಿದ ಅವರು ಗಾಂಧಿಜೀ ವಿಚಾರಧಾರೆಗಳು ಸಮಾಜ ಮುಖಿಯಾಗಿ ದೇಶದ ಅಭಿವೃದ್ಧಿಯ ಕಡೆ ಇರುತ್ತಿದ್ದವು ಎಂದು ಅವರು ತಿಳಿಸಿದರು.

ಅಸ್ಪಶ್ಯತೆಯ ಬಗ್ಗೆ ಗಾಂಧೀಜಿ ಅವರಿಗೆ ದಕ್ಷಿಣ ಆಫ್ರಿಕದಲ್ಲಿ ಇರುವಾಗ ಅರಿವು ಬಂದಿತ್ತು. ಇದನ್ನು ಮನಗಂಡ ಅವರು ಅಂದಿನಿಂದಲೇ ಅಹಿಂಸಾತ್ಮಕ ಪ್ರತಿಭಟನೆಯ ಮೂಲಕ ಇದನ್ನು ನಿರ್ಮೂಲನೆ ಮಾಡಲು ಪಣತೊಟ್ಟ ಮಹಾ ನಾಯಕರಾದ ಅವರು ಆಂಗ್ಲರ ವಿರುದ್ಧ ಸತ್ಯಾಗ್ರಹವೆಂಬ ರಕ್ತ ರಹಿತ ಅಸ್ತ್ರದಿಂದ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿ ಅವರ ಸತ್ಯಾಗ್ರಹ ಮಂತ್ರದ ಶಕ್ತಿ ಕಂಡು ಜಗತ್ತು ನಿಬ್ಬೆರಗಾಯಿತು ಎಂದು ಅವರು ತಿಳಿಸಿದರು.

ಇದೇ ರೀತಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಸಾರ್ಥಕಗೊಳಿಸಿದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರದು ಸರಳ ಉಡುಪು, ಮೃದು ನುಡಿ, ಆಡಿದ ಮಾತು ಇತರರಿಗೆ ಕೇಳಿತೋ ಇಲ್ಲವೂ ಆದರೆ ಮಾತಿಗೆ ಮೀರಿದ ಮಂದ ಹಾಸ, ಗತ್ತು, ದರ್ಪ ಸಲ್ಪವೂ ಇಲ್ಲದೇ ಅಧಿಕಾರವನ್ನು ಬಯಸದೇ ದೇಶಕ್ಕಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ. ಹೂವಿನ ಹಾಗೆ ಮೃದುವಾಗಿರುವ ಶಾಸ್ತ್ರಿಯವರು ಅವರು ವಜ್ರದ ಹಾಗೆ ಕಠೋರವಾಗಿಯೂ ಇರಬಲ್ಲರೆಂಬುದನ್ನು ತಮ್ಮ ಕೆಲಸಗಳಿಂದ ತೋರಿಸುವ ಮೂಲಕ ಭಾರತದ ಗೌರವವನ್ನು ನಾಲ್ಕು ದಿಕ್ಕುಗಳಿಗೂ ಹಬ್ಬಿಸಿದರು ಎಂದು ಹೇಳಿದರು.

‘ಮಾತೃಪೂರ್ಣ’ ಉತ್ತಮ ಯೋಜನೆ : ಸಿ.ಎಸ್.ಪುಟ್ಟರಾಜು

ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ಅಂಗನವಾಡಿಗಳಲ್ಲಿ ಶಿಶುಗಳ, ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸರಕಾರದ ಯೋಜನೆಯಲ್ಲಿ ಇನ್ನೊಂದು ಮಹತ್ವದ ಸೇರ್ಪಡೆಯಾಗಿ ‘ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು ಮಕ್ಕಳು ಹುಟ್ಟುವ ಮೊದಲೇ ಆರೋಗ್ಯಯುತ ಮಕ್ಕಳು ಹುಟ್ಟಲು ಈ ಯೋಜನೆ ಅತ್ಯಂತ ಮಹತ್ವಪೂರ್ಣವಾಗಿದೆ. ಈ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವುದು ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಕೊಡಲ್ಪಡುವ ವೈಶಿಷ್ಠ ಪೂರ್ಣ ಯೋಜನೆಯಾಗಿದೆ ಎಂದು ತಿಳಿಸಿದ ಅವರು ಇದರ ಸದುಪಯೋಗವನ್ನು ಪಲಾನುಭವಿಗಳು ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸರ್ಕಾರ ಗಾಂಧೀಜಿ ಅವರ ಕನಸು ಗ್ರಾಮ ಸ್ವರಾಜ್ಯದ ಏಳಿಗೆಯಾಗಿತ್ತು. ಮಾನವ ಕಲ್ಯಾಣದ ಶಾಶ್ವತ ಹಿತ ಚಿಂತನವನ್ನು ಬಯಸುವ ಅಪರೂಪದ ಮಾನವತಾವಾದಿ ಆಗಿದ್ದರು. ಹಾಗೂ ಸಮಸ್ತ ಮಾನವ , ಪಶು ಪಕ್ಷಿ ಎಲ್ಲವೂ ಸಂತೃಪ್ತ ಜೀವನ ನಡೆಸಬೇಕೆಂಬ ತುಡಿತವನ್ನು ಸದಾ ಹೊಂದಿದ್ದರು ಎಂದು ತಿಳಿಸಿದ ಅವರು ಆತ್ಮ ಕಲ್ಯಾಣದ ಕನಸುಗಾರರಾದ ಗಾಂಧೀಜಿ ಅವರು ಸದಾ ಓಳ್ಳೆಯದನ್ನೆ ಚಿಂತಿಸುತ್ತಿದ್ದರು. ಮಾನವ ಉದ್ಧಾರವೇ ಲೋಕೋಧ್ಧಾರ ಎಂದು ಗಾಂಧೀಜಿ ಸದಾ ಧ್ಯಾನಿಸುತ್ತಿದ್ದರು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಜನಪದ ಹಾಗೂ ಮಾರ್ಚ್ ಕರ್ನಾಟಕ ಕಿರುಹೊತ್ತಿಗೆಯ ವಿಶೇಷ ಸಂಚಿಕೆಯನ್ನು ಮದ್ದೂರು ಶಾಸಕರಾದ ಡಿ.ಸಿ.ತಮ್ಮಣ್ಣ ಅವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಹೊಸಹಳ್ಳಿ ಬೋರೆಗೌಡ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುನಾವರ್ ಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಅಪರ ಜಿಲ್ಲಾಧಿಕಾರಿಗಳಾದಬಿ.ಪಿ. ವಿಜಯ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆಯ ಉಪ ನಿರ್ದೇಶಕರಾದ ದಿವಾಕರ್, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಸಿದ್ಧರಾಮಪ್ಪ, ಮಂಡ್ಯ ಉಪ ವಿಭಾಗಧೀಕಾರಿ ರಾಜೇಶ್, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಎಂ.ಬಿ.ಶ್ರೀನಿವಾಸ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ:

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗವಿರುವ ಕಾವೇರಿ ಉದ್ಯಾನವನದಲ್ಲಿ ಗಾಂಧೀಜಿ ಅವರ ಪುತ್ಥಳಿಗೆ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್. ಮಂಜುಶ್ರೀ ಅವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

(ಎನ್.ಬಿ)

Leave a Reply

comments

Related Articles

error: