ಕರ್ನಾಟಕಮೈಸೂರು

ಮೈಸೂರು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ತಜ್ಞರ ತಂಡ ಭೇಟಿ: ತುರ್ತು ಪರಿಹಾರದ ಕುರಿತು ಜಿಲ್ಲಾಡಳಿತದಿಂದ ಮನವರಿಕೆ

ಮೂವರು ತಜ್ಞರನ್ನು ಒಳಗೊಂಡ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ತಂಡವು central-team-2ಮೈಸೂರು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಇಂದು (ನ.4) ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿತು.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಈಗಾಗಲೇ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಮಳೆಯಿಲ್ಲದೆ ಬೆಳೆ ಹಾನಿಯಾಗಿದ್ದು 99.61 ಕೋಟಿ ರೂ. ಬರ ಪರಿಹಾರ ಧನದ ಅಗತ್ಯ ಒದಗಬಹುದು ಎಂದು ಈ ವೇಳೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಟ್ಟಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷವೂ ರಾಜ್ಯದಲ್ಲಿ ಬರ ಪರಿಸ್ಥಿತಿ ಇತ್ತು. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮೂರು ಪಟ್ಟು ಹೆಚ್ಚು ಬರ ಪರಿಸ್ಥಿತಿ ತಲೆದೋರಿದೆ.

ಹೈದ್ರಾಬಾದ್ ನ ಎಣ್ಣೆಬೀಜ ಬೆಳೆ ವಿಭಾಗದ ನಿರ್ದೇಶಕ ಎಸ್.ಎಸ್. ಕೋಲ್ಹಟ್ಕರ್, ದೆಹಲಿಯ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಸತೀಶ್ ಕುಮಾರ್ ಕಂಬೋಜ್ ಮತ್ತು ಹಣಕಾಸು ವಿಭಾಗದ ಸಹ ನಿರ್ದೇಶಕ  ಎಸ್.ಸಿ. ಮೀನಾ ಅವರನ್ನೊಳಗೊಂಡ ತಂಡವು ಟಿ. ನರಸೀಪುರ, ನಂಜನಗೂಡು, ಎಚ್.ಡಿ. ಕೋಟೆ, ಮೈಸೂರು, ಹುಣಸೂರು, ಕೆ.ಆರ್. ನಗರ ಮತ್ತು ಪಿರಿಯಾಪಟ್ಟಣ ತಾಲೂಕುಗಳಿಗೆ ಗುರುವಾರ ಮತ್ತು ಶುಕ್ರವಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.

ಮೈಸೂರು ಜಿಲ್ಲೆಯಲ್ಲಿ 1,25,342 ಹೆಕ್ಟೇರ್’ನಲ್ಲಿ ಬಿತ್ತಿದ ಬಿತ್ತನೆ ಮೊಳಕೆ ಹಂತದಲ್ಲೇ ನೀರಿನ ಅಭಾವದಿಂದ ಹಾಳಾಗಿದೆ. 1,18,776 ಹೆಕ್ಟೇರ್ ನಲ್ಲಿ ಎದ್ದು ನಿಂತ ಪೈರು 33%ರಷ್ಟು ಒಣಗಿದೆ. ಮೈಸೂರು ತಾಲೂಕಿನಲ್ಲಿ ಅತಿ ಹೆಚ್ಚು ಶೇ. 94.1 ರಷ್ಟು ಅರ್ಥಾತ್ 16,880 ಹೆಕ್ಟೇರ್ ಬೆಳೆ ನಷ್ಟವಾಗಿದೆ. ನಂಜನಗೂಡಿನಲ್ಲಿ 88.1%ರಷ್ಟು ಅರ್ಥಾತ್ 28,469 ಹೆಕ್ಟೇರ್ ಬೆಳೆ ನಾಶವಾಗಿದೆ. ಟಿ. ನರಸೀಪುರದಲ್ಲಿ ಶೇ. 83.90 ರಷ್ಟು ಅರ್ಥಾತ್ 7,767 ಎಕರೆ, ಹೆಚ್.ಡಿ. ಕೋಟೆಯಲ್ಲಿ ಶೇ. 62.8 ರಷ್ಟು ಅರ್ಥಾತ್ 33,838 ಹೆಕ್ಟೇರ್, ಕೆ.ಆರ್. ನಗರದಲ್ಲಿ ಶೇ. 40.6 ರಷ್ಟು ಅರ್ಥಾತ್ 9,830 ಹೆಕ್ಟೇರ್, ಪಿರಿಯಾಪಟ್ಟಣದಲ್ಲಿ ಶೇ. 23.3 ರಷ್ಟು ಅರ್ಥಾತ್ 8,865 ಹೆಕ್ಟೇರ್, ಹುಣಸೂರಿನಲ್ಲಿ ಶೇ. 20.9 ರಷ್ಟು ಅರ್ಥಾತ್  16,693 ಹೆಕ್ಟೇರ್ ಬೆಳೆ ನೀರಿಲ್ಲದೆ ಒಣಗಿ ನಾಶವಾಗಿದೆ.

ಜಿಲ್ಲಾಧಿಕಾರಿ ರಂದೀಪ್ ಅವರು ಮಳೆಯ ಅಭಾವ, ನೀರಿನ ಕೊರತೆ, ರೈತರ ಸಾವು, ಕುಡಿಯುವ ನೀರು ಪೂರೈಕೆ, ಜಾನುವಾರು ಶಿಬಿರಗಳಿಗೆ ನೀರು-ಮೇವು, ಔಷಧಗಳ ಪೂರೈಕೆ ಸೇರಿದಂತೆ ಹಲವು ವಿಷಯಗಳ ಕುರಿತು ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ಕಡಿಮೆ ಮಳೆಯಾಗಿರುವುದರಿಂದ ಬರ ಪರಿಸ್ಥಿತಿ ಎದುರಾಗಿದೆ. ಕೇವಲ 45% ರಷ್ಟು ಮಳೆಯಾಗಿದೆ ಎಂಬ ಮಾಹಿತಿಯನ್ನೂ ತಂಡವು ಕಲೆ ಹಾಕಿದೆ.

‘ಸಿಟಿಟುಡೆ’ಯೊಂದಿಗೆ ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಮಾತನಾಡಿ, “ಪತ್ರ ಬರೆದ ವಾರದೊಳಗೆ ಕೇಂದ್ರ ಅಧ್ಯಯನ ತಂಡ ಸಮೀಕ್ಷೆಗೆ ಆಗಮಿಸಿದೆ. ತಂಡದ ಸದಸ್ಯರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ಕೇಂದ್ರಕ್ಕೆ ವಾಸ್ತವ ವರದಿ ನೀಡುವ ಭರವಸೆ ತಮಗಿದೆ” ಎಂದರು.

Leave a Reply

comments

Related Articles

error: