ಕರ್ನಾಟಕಮೈಸೂರು

ಗಿರಿಜನರ ಮನೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ: ಖುದ್ದು ಭೇಟಿ ನೀಡಿ ಅಧಿಕಾರಿಗಳಿಂದ ಪರಿಶೀಲನೆ

ಬೈಲಕುಪ್ಪೆ: ನಿರ್ಮಿತಿ ಕೇಂದ್ರದಿಂದ ಗಿರಿಜನರ ಮನೆ ನಿರ್ಮಾಣಕ್ಕೆ ಫಲಾನುಭವಿಗಳ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದಲ್ಲದೆ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ತಾ.ಪಂ. ಸದಸ್ಯ ಮುತ್ತು ಹಾಗೂ ಗಿರಿಜನ ಮುಖಂಡ ಶಾಂತಕುಮಾರ್ ಆರೋಪಿಸಿದ್ದಾರೆ.

04-by-ph-01-webತಾಲೂಕಿನ ರಾಣಿಗೇಟ್ ಸಮೀಪದ ಎಂಭತ್ತೆಕರೆ ಹಾಡಿ ಮತ್ತು ಲಿಂಗಪುರ ಗಿರಿಜನ ಹಾಡಿಯಲ್ಲಿ ಗಿರಿಜನರಿಗೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಳೆದ 4 ತಿಂಗಳುಗಳ ಹಿಂದೆ 8 ಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ನಿರ್ಮಿಸಿದ್ದು, ಎಂಭತ್ತೆಕರೆ ಹಾಡಿ ಅಣ್ಣಯ್ಯನ ಹೆಂಡತಿ ಶಿವಮ್ಮ, ಸಿದ್ದಯ್ಯನ ಹೆಂಡತಿ ರುಕ್ಮಿಣಿ, ಮಾದಯ್ಯನ ಹೆಂಡತಿ ಅಕ್ಕಮ್ಮ, ಸಿದ್ದಲಿಂಗಯ್ಯನ ಹೆಂಡತಿ ದೇವಿರಮ್ಮ ಸೇರಿದಂತೆ ಹಲವರಿಗೆ ಪ್ರಸ್ತುತ 2 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಮಂಜೂರು ಮಾಡಲಾಗಿದೆ.

ಈ ಮನೆಗಳನ್ನು ನಿರ್ಮಿಸಿಕೊಡಲು ಮೈಸೂರು ವಿಭಾಗದ ನಿರ್ಮಿತಿ ಕೇಂದ್ರವು ಜವಾಬ್ದಾರಿ ಹೊತ್ತಿದ್ದು, ಈ ವ್ಯಾಪ್ತಿಗೆ ಬರುವ ಸಹಾಯಕ ಇಂಜಿನಿಯರ್ ಜಯರಾಮ್ ಅವರು ಮೇಲ್ವಿಚಾರಣೆ ಕಾರ್ಯನಿರ್ವಹಿಸುತ್ತಾರೆ. ಕಾಮಗಾರಿ ಕಳಪೆಯಾಗಿದ್ದು, ನಾಮಕಾವಸ್ತೆಗೆ ಮುಗಿಸಿ ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ ಎಂದು ಮುತ್ತು ಹಾಗೂ ಶಾಂತರಾಜ್ ತಿಳಿಸಿದ್ದಾರೆ.

4 ತಿಂಗಳುಗಳ ಹಿಂದೆ ನಿರ್ಮಿಸಿರುವ ಮನೆ ಕಾಮಗಾರಿ ಕಳಪೆಯಾಗಿದ್ದು, ಮನೆಯ ಮೇಲ್ಛಾವಣಿ ಗಾಳಿಗೆ ಹಾರಿಹೋಗಿದೆ. ಶೌಚಾಲಯ ಕುಸಿದು ಅವ್ಯವಸ್ತೆಯಾಗಿದೆ ಎಂದು ಫಲಾನುಭವಿ ಸಣ್ಣಯ್ಯನ ಹೆಂಡತಿ ಚನ್ನಮ್ಮ ದೂರಿದ್ದಾರೆ.

ಈ ಬಗ್ಗೆ ಜಿಲ್ಲಾ ಯೋಜನ ಸಮನ್ವಯ ಅಧಿಕಾರಿ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿಯಾಗಿರುವ ಶಿವಕುಮಾರ್ ಅವರಿಗೆ ದೂರು ನೀಡಿದ ಪರಿಣಾಮ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪರೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಾಮಗಾರಿಗೆ ಬಳಸಿರುವ ಕಚ್ಚಾ ಸಾಮಾಗ್ರಿಗಳೂ ಕಳಪೆಯಾಗಿದ್ದು, ಮನೆ ನಿರ್ಮಿಸುತ್ತಿರುವ ಜಾಗ ಕಪ್ಪು ಮಣ್ಣಿನಿಂದ ಕೂಡಿರುವುದರಿಂದ ಬಿರುಕು ಬಿಟ್ಟು ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಡಿಪಾಯವನ್ನು ಆಳವಾಗಿ ತೆಗೆದು ಉತ್ತಮ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದ್ದರು.

ಸಹಾಯಕ ಇಂಜಿನಿಯರ್ ಜಯರಾಮ್ ಅವರು ಖುದ್ದು ಹಾಜರಿದ್ದು ಕೆಲಸವನ್ನು ನಿರ್ವಹಿಸುವಂತೆ ತಿಳಿಸಿದ್ದಾರೆ. ಕಳಪೆ ಕಾಮಗಾರಿ ಮಾಡಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

04byl-ph-02-webಫಲಾನುಭವಿಗಳಲ್ಲಿ ಒಬ್ಬರಾದ ದೇವಿರಮ್ಮ ಅವರು ತಮ್ಮ ಅಳಲು ತೋಡಿಕೊಂಡ ಪರಿ ಇದು: “ಕಾಮಗಾರಿ ನಡೆಸಲು ನೀವೇ ನೀರು ಒದಗಿಸಿ ಕೊಡಬೇಕೆಂದು ನಮಗೆ ಒತ್ತಾಯ ಮಾಡುತ್ತಿದ್ದಾರೆ. ಕುಡಿಯಲೂ ನೀರಿಲ್ಲದೆ ಬೇರೆಯವರ ತೋಟದಿಂದ ತಂದು ಕುಡಿಯುತ್ತಿದ್ದೇವೆ ಆದರೆ ಮನೆ ಕಟ್ಟಲು ನೀರು ಒದಗಿಸಿ ಎಂದು ಬಲವಂತ ಮಾಡುತ್ತಿದ್ದಾರೆ. ಎಲ್ಲಿಂದ ನೀರು ತಂದು ಕೊಡುವುದು. ಮನೆಯಲ್ಲಿರುವ ನಮ್ಮ 4 ಮಕ್ಕಳನ್ನು ಸಹ ಕಲ್ಲು ನೀರು ಹೊತ್ತು ತಂದು ಕೊಡಲು ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ” ಎಂದು ತಮ್ಮ ಪರಿಸ್ಥಿತಿ ಬಿಚ್ಚಿಟ್ಟರು.

“ಕಾಮಗಾರಿಗೆ ನೀರು ಪೂರೈಸಿಕೊಳ್ಳಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವಾಹನದಲ್ಲಿ ನೀರು ತಂದು ಕಾಮಗಾರಿಯನ್ನು ಮುಗಿಸಲಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿ ಮಾಡಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ” ತಾಲೂಕು ಪಂಚಾಯಿತಿ ಸದಸ್ಯ ಮತ್ತು ಹಾಗೂ ಗಿರಿಜನ ಮುಖಂಡ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

 

ವರದಿ: ಬಿ.ಆರ್. ರಾಜೇಶ್

Leave a Reply

comments

Related Articles

error: