ದೇಶಪ್ರಮುಖ ಸುದ್ದಿ

ಪಂಜಾಬ್‍ನಲ್ಲಿ ಅತ್ಯಾಚಾರಿ ಬಾಬಾ ರಾಂರಹೀಂ ಸಿಂಗ್ ಆಪ್ತೆ ಹನಿಪ್ರೀತ್ ಬಂಧನ

ಪಂಚಕುಲ, ಅ.3 (ಪ್ರಮುಖ ಸುದ್ದಿ): ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರುಮೀತ್ ರಾಮ್‍ ರಹೀಮ್ ಸಿಂಗ್ ಆಪ್ತೆ ಹಾಗೂ ದತ್ತು ಪುತ್ರಿ ಎನ್ನಲಾದ ಹನಿಪ್ರೀತ್ ಇನ್ಸಾನ್‍ ಅವರನ್ನು ಹರಿಯಾಣ ಪೊಲೀಸರು ಇಂದು (ಮಂಗಳವಾರ) ಬಂಧಿಸಿದ್ದಾರೆ.

ರಾಮ್ ರಹೀಂ ಆಪ್ತೆ ಹಾಗೂ ದತ್ತು ಪುತ್ರಿ ಎನ್ನಲಾಗುತ್ತಿರುವ ಈಕೆಯನ್ನು ಪಂಜಾಬ್‍ನಲ್ಲಿ ಬಂಧಿಸಲಾಗಿದೆ. ರಾಮ್ ರಹೀಮ್‍ಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿ ಜೈಲು ಪಾಲಾದ ನಂತರ ತಲೆಮರೆಸಿಕೊಂಡಿದ್ದ ಹನಿಪ್ರೀತ್‍ಳನ್ನು ಒಂದು ತಿಂಗಳ ನಂತರ ಬಂಧಿಸುವಲ್ಲಿ ಇಂದು ಜಿರ್ಕಾಪುರ್-ಪಟಿಯಾಲ ರಸ್ತೆಯಲ್ಲಿ ಹರಿಯಾಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಿಯಾಂಕ ತನೆಜಾ ಅಲಿಯಾಸ್ ಹನಿಪ್ರೀತ್‍ಳನ್ನು ಜಿರ್ಕಾಪುರ್-ಪಟಿಯಾಲ ರಸ್ತೆಯಲ್ಲಿ ಬಂಧಿಸಿರುವುದಾಗಿ ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ.ಎಸ್.ಸಂಧು ಹೇಳಿದ್ದಾರೆ. ವಿಶೇಷ ತನಿಖಾ ತಂಡ -ಎಸ್‌ಐಟಿ ಮುಖ್ಯಸ್ಥ ಮುಕೇಶ್ ಕುಮಾರ್ ನೇತೃತ್ವದ ತಂಡ ಹನಿಪ್ರೀತ್‍ಳನ್ನು ವಶಕ್ಕೆ ಪಡೆದಿದ್ದು, ನಾಳೆ ಪಂಚಕುಲ ಕೋರ್ಟ್‍ಗೆ ಹಾಜರುಪಡಿಸುವುದಾಗಿ ಪೊಲೀಸ್ ಆಯುಕ್ತ ಎ ಎಸ್ ಚಾವ್ಲಾ ಅವರು ತಿಳಿಸಿದ್ದಾರೆ. 41 ಮಂದಿಯನ್ನು ಬಲಿ ಪಡೆದ ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ ಹನಿಪ್ರೀತ್ ಪಾತ್ರ ಮತ್ತು ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ವೇಳೆ ಆಕೆಯ ಯಾರು ಆಶ್ರಯ, ಬೆಂಬಲ ನೀಡಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಚಾವ್ಲಾ ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ಅಪರಾಧಿ ಎಂದು ಘೋಷಿಸಿದ ಬಳಿಕ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಪ್ರೀತ್ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಅವರು, ನಿನ್ನೆ ದಿಢೀರ್ ರಾಷ್ಟ್ರೀಯ ಮಾಧ್ಯಮವೊಂದರ ಮುಂದೆ ಕಾಣಿಸಿಕೊಂಡು ತಾವು ಮುಂದೆ ಏನು ಮಾಡಬೇಕು ಎನ್ನುವ ಕುರಿತು ಕಾನೂನು ಸಲಹೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಳು.

(ಎನ್.ಬಿ)

Leave a Reply

comments

Related Articles

error: