ಕರ್ನಾಟಕಮೈಸೂರು

ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್ : ಅಗತ್ಯ ಸಿದ್ಧತೆಗೆ ಮಂಡ್ಯ ಜಿಲ್ಲಾಧಿಕಾರಿ ಸೂಚನೆ

ಮಂಡ್ಯ (ಅ.3): ವಿಷನ್ 2025 ಡಾಕ್ಯುಮೆಂಟ್ ಯೋಜನೆ ಅಂಗವಾಗಿ 2025ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದರ ಕುರಿತು ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಸೂಚನೆ ನೀಡಿದ್ದಾರೆ.

ಇಂದು ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮುಂದಿನ ಏಳು ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯ ನೀಲಿನಕ್ಷೆ ಮತ್ತು ಅನುಷ್ಠಾನ ಕಾರ್ಯಕ್ರಮಗಳ ಬಗ್ಗೆ ರೂಪರೇಷೆ ಸಿದ್ಧಪಡಿಸಲು ಕಾರ್ಯರಂಭ ಮಾಡಿದೆ. ಇದಕ್ಕಾಗಿ ಕೃಷಿ, ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ, ನಗರ ಮತ್ತು ಗ್ರಾಮೀಣಾಭಿವೃದ್ಧಿ, ಆಡಳಿತ, ಕಾನೂನು ಸೇರಿದಂತೆ ಪ್ರಮುಖ ಇಲಾಖೆಗಳನ್ನೊಳಗೊಂಡ 13 ವಲಯಗಳನ್ನು ಗುರುತಿಸಿದೆ ಎಂದರು.

ವಿಷನ್ ಡಾಕ್ಯುಮೆಂಟರಿ ಪ್ರಾಜೆಕ್ಟ್ ತಯಾರಿಸಲು ಜಿಲ್ಲಾಡಳಿತ 13 ವಲಯಗಳನ್ನು ಸೇರಿಸಿ 5 ಗುಂಪು-ತಂಡಗಳನ್ನಾಗಿ ವಿಂಗಡಿಸಿದೆ. ನಗರ ಮೂಲಸೌಲಭ್ಯ ಹಾಗೂ ಸ್ಮಾರ್ಟ್‍ಸಿಟಿ, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಶಿಕ್ಷಣ, ಕೃಷಿ ಮತ್ತು ಅಲೈಡ್ ಗ್ರಾಮೀಣಾಭಿವೃದ್ಧಿ, ಕೈಗಾರಿಕಾಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಆಡಳಿತ, ಕಾನೂನು ಮತ್ತು ನ್ಯಾಯ ಇವೇ 5 ಪ್ರಮುಖ ತಂಡಗಳಾಗಿವೆ ಎಂದರು.

ಈ ಐದು ತಂಡಗಳಲ್ಲಿ ಪ್ರತಿ ತಂಡದಲ್ಲಿ ಜನಪ್ರತಿನಿಧಿಗಳು, ಧರ್ಮದರ್ಶಿಗಳು, ಎನ್.ಜಿ.ಒಗಳು, ಶಿಕ್ಷಣ ತಜ್ಞರು, ಬುದ್ದಿಜೀವಿಗಳು ಸಂಪನ್ಮೂಲ ವ್ಯಕ್ತಿಗಳು, ಮಾಧ್ಯಮದವರು ಹಾಗೂ ನಾಗರೀಕರನ್ನು ಒಳಗೊಂಡಂತೆ 20 ರಿಂದ 25 ಮಂದಿ ಸದಸ್ಯರಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರು ಮಾತನಾಡಿ, ಪ್ರಸ್ತುತ ಈಗಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸಿ ಮುಂದೆ ಕೊಂಡೊಯ್ಯಬಹುದು ಎಂಬ ಬಗ್ಗೆ ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಪ್ರತಿ ತಂಡಗಳಲ್ಲಿಯೂ ಗುಂಪು ಚರ್ಚೆ ನಡೆಯಬೇಕು. ಮುಖ್ಯವಾಗಿ ಆಯಾ ಕ್ಷೇತ್ರದ ವಿಷಯ ವ್ಯಾಪ್ತಿಯ ಅರಿವಿದ್ದು, ಸುಲಲಿತವಾಗಿ ಮಾತನಾಡುವ ಪರಿಣತಿ ಇರುವ ಪ್ರತಿಭಾನ್ವಿತರನ್ನು ಗುರುತಿಸಬೇಕು. ಅಕ್ಟೋಬರ್ 4 ರಂದು ಅಂತಹ ವಿಷಯ ಪರಿಣತರ ಪಟ್ಟಿ ಸಂಗ್ರಹಿಸಿ, ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಅಕ್ಟೋಬರ್ 9 ರಂದು ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಮಟ್ಟದಲ್ಲಿ ನಡೆಸಲಾಗಿರುವ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ನಡೆಸಲಿದೆ. ಈ ಹಂತದಲ್ಲಿ ನಾವು ವಿಷಯ ಮಂಡನೆಗೆ ಸಿದ್ಧರಿರಬೇಕು ಎಂದರು.

ಅಕ್ಟೋಬರ್ 19 ರಂದು ವಿಷನ್ ಡಾಕ್ಯುಮೆಂಟ್ ಪ್ರಾಜೆಕ್ಟ್‍ನ ಸಂಬಂಧ ನಡೆಯುವ ಕಾರ್ಯಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಕೃಷ್ಣಪ್ಪ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಗಾರದಲ್ಲಿ ಭಾಗವಹಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್‍ಮೆನ್ ತುಷಾರ್‍ಗಿರಿನಾಥ್ ಅವರು ಜಿಲ್ಲೆಗೆ ಭೇಟಿ ನೀಡಿ ಮುಂದಿನ 7 ವರ್ಷಗಳಲ್ಲಿ ರಾಜ್ಯದ ಸಮಗ್ರಾಭಿವೃದ್ಧಿಗೆ ನೀವು ಏನು ಬಯಸುತ್ತೀರಿ. ಎನ್ನುವ ಕುರಿತು ಪ್ರತಿ ವಿಷಯತಜ್ಞ ತಂಡಗಳಿಂದ ಅಭಿಪ್ರಾಯ, ಅನಿಸಿಕೆ ಹಾಗೂ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‍ಅವರು ಸಭೆಗೆ ಮಾಹಿತಿ ನೀಡಿದರು.

ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್‍ನ್ನು ಮತ್ತಷ್ಟು ಬಲಪಡಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಸಂಗ್ರಹಿಸಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಲಹಾ ಪೆಟ್ಟಿಗೆಯನ್ನು ಇಡಲಾಗುವುದು ಮತ್ತು ಇ-ಮೇಲ್ ವಿಳಾಸ [email protected] ಅಥವಾ [email protected] ಮೂಲಕವೂ ಸಹ ಸಾರ್ವಜನಿಕರು ತಮ್ಮ ಸಲಹೆಗಳನ್ನು ಕಳುಹಿಸಬಹುದು ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣರಾಜು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

(ಎನ್.ಬಿ)

Leave a Reply

comments

Related Articles

error: