ಕರ್ನಾಟಕಪ್ರಮುಖ ಸುದ್ದಿ

ಚಿರನಿದ್ರೆಗೆ ಜಾರಿದ ಯಕ್ಷರಂಗದ ಮೇರು ಪ್ರತಿಭೆ

ರಾಜ್ಯ(ಉತ್ತರಕನ್ನಡ)ಅ.4:- ಯಕ್ಷರಂಗದ ಮೇರು ಪ್ರತಿಭೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (84)ಮಂಗಳವಾರ ಸಂಜೆ ಚಿರನಿದ್ರೆಗೆ ಜಾರಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ ನಾಲ್ಕುದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ನ್ಯುಮೋನಿಯಾ ಹಾಗೂ ಲಘು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಿಟ್ಟಾಣಿಯವರಾದ ಇವರು ಯಕ್ಷಗಾನದ ದಂತಕಥೆಯೆಂದೇ ಹೆಸರಾಗಿದ್ದರು. ಇವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಪದ್ಮಶ್ರೀ ಅಷ್ಟೇ ಅಲ್ಲದೇ ಹಲವಾರು ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದಾರೆ.

ಅವರು ಯಕ್ಷಗಾನದ ವೇಷಕಟ್ಟಿ ವೇದಿಕೆಯನ್ನು ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರಿಂದ ಬರುವ ಕರತಾಡನ ಹಾಗೂ ಶಿಳ್ಳೆಗಳೇ ಅವರ ಕಲಾಪ್ರೌಢಿಮೆಯನ್ನು ಸಾರುತ್ತಿದ್ದವು. ಆದರೆ ಅವೆಲ್ಲ ಇನ್ನು ಕೇವಲ ನೆನಪು ಮಾತ್ರ. ಬುಧವಾರ ಅವರ  ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಪುತ್ರರು ಹಾಗೂ ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಯಕ್ಷಗಾನ ಕಲಾಲೋಕ ಕಂಬನಿ ಮಿಡಿದಿದೆ. (ಎಸ್.ಎಚ್)

Leave a Reply

comments

Related Articles

error: