ಕರ್ನಾಟಕಪ್ರಮುಖ ಸುದ್ದಿ

ಹೆಚ್.ಡಿ.ಕುಮಾರಸ್ವಾಮಿ ಹುಬ್ಬಳಿ ಮನೆಯಲ್ಲಿ ಬೆಂಕಿ : ಬೆಲೆಬಾಳುವ ವಸ್ತುಗಳು ನಾಶ

ಹುಬ್ಬಳ್ಳಿ, ಅ.4: ಮಾಜಿ ಸಿ.ಎಂ. ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಜನಸ್ಪಂದನೆಯ ಸಲುವಾಗಿ ಹುಬ್ಬಳ್ಳಿಯಲ್ಲಿ ಮನೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮನೆಯಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

ನಗರದ ಬೈರಿ ದೇವರಕೊಪ್ಪದ ಮಾಯಕಾರ ಕಾಲೋನಿಯಲ್ಲಿರುವ ಈ ಮನೆಯಲ್ಲಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಮಧ್ಯರಾತ್ರಿ ಸುಮಾರು 12 ಘಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದೆ ಎನ್ನಲಾಗಿದೆ. ಮನೆಯಲ್ಲಿ ಕೆಲಸಗಾರರು ಊಟ ಮಾಡಿ ಮಲಗಿದ್ದಾಗ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಬೆಂಕಿ ಅನಾಹುತದಲ್ಲಿ ಎರಡು ಸೋಫಾಸೆಟ್’ಗಳು ಮತ್ತು ಇತರೆ ವಸ್ತುಗಳು ಭಸ್ಮವಾಗಿವೆ. ಅದೃಷ್ಟವಶಾತ್ ಬೆಂಕಿ ಅನಾಹುತದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟನೆ ಮಾಡಬೇಕು ಎಂಬ ದೃಷ್ಟಿಯಿಂದ ಹನ್ನೊಂದು ತಿಂಗಳ ಹಿಂದೆ ಕುಮಾರಸ್ವಾಮಿಯವರು ಈ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಕೆಲ ಸಮಯ ಈ ಮನೆಯಲ್ಲಿ ವಾಸ್ತವ್ಯವನ್ನೂ ಕೂಡ ಮಾಡಿದ್ದಾರೆ.

(ಎನ್.ಬಿ)

Leave a Reply

comments

Related Articles

error: