ಮೈಸೂರು

ಗೋವಾದಲ್ಲಿನ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮೈಸೂರು,ಅ.4-ಗೋವಾದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸಿ ಹಾಗೂ ಮಹದಾಯಿ ಮತ್ತು ಕಳಸಾ ಬಂಡೂರಿ ನಾಲಾ ವಿಚಾರದಲ್ಲಿ ಕರ್ನಾಟಕ ವಿರೋಧಿ ಧೋರಣೆಯನ್ನು ತೋರುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ವಿರೋಧಿ ನೀತಿಯನ್ನು ಖಂಡಿಸಿ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದವರು ಪರಿಕ್ಕರ್ ಅವರ ಪ್ರತಿಕೃತಿಯನ್ನು ನೇಣು ಹಾಕುವ ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಗೋವಾ ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗೋವಾ ಮುಖ್ಯಮಂತ್ರಿ ಮಹೋಹರ್ ಪರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ನಿರಂತರವಾಗಿ 2014 ರಿಂದ ಇಲ್ಲಿಯವರೆಗೆ ಕನ್ನಡಿಗರ ಸುಮಾರು 800ಕ್ಕೂ ಹೆಚ್ಚು ಮನೆಗಳು ಹಾಗೂ ಬಸವೇಶ್ವರ ದೇವಸ್ಥಾನವನ್ನು ಧ್ವಂಸಮಾಡಿ ನೆಲಸಮಗೊಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕೂಡಲೇ ಮಧ್ಯಪ್ರವೇಶಿಸಿ ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಾದ ಗೋವಾ ಕನ್ನಡಿಗರ ಮೇಲೆ ದಬ್ಬಾಳಿಕೆ ತಡೆಗಟ್ಟಿ ಕನ್ನಡಿಗರ ಮನೆಗಳನ್ನು ಒಡೆಯುವುದನ್ನು ತಡೆಯಬೇಕು ಹಾಗೂ ಈಗಾಗಲೇ ಒಡೆದಿರುವ ಮನೆಗಳ ಮಾಲೀಕರಿಗೆ ಬದಲಿ ಶಾಶ್ವತ ಪರಿಹಾರವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಎಸ್.ಗುರುಶಂಕರ್, ಸುರೇಶ್, ಸೋಗಹಳ್ಳಿ ತುಂಗಾ, ನಿಂಗರಾಜು, ಜಯಕುಮಾರ್, ಕುಮಾರ್, ವಿಶಾಲ್, ಮಿನಿ ಬಂಗಾರಪ್ಪ, ಶ್ರೀನಿವಾಸ್, ಸಂತೋಷ್ ಇತರರು ಭಾಗವಹಿಸಿದ್ದರು. (ವರದಿ-ಎಚ್.ಎನ್, ಎಂ.ಎನ್)

Leave a Reply

comments

Related Articles

error: