ಪ್ರಮುಖ ಸುದ್ದಿಮೈಸೂರು

ನಗರೋತ್ಥಾನ ಯೋಜನೆ ಕಳಪೆ ಕಾಮಗಾರಿ ಖಂಡಿಸಿ ಸಾರ್ವಜನಿಕ ಜಾಗೃತಿ ಜಾಥ : ರಾಮದಾಸ್

ಮೈಸೂರು,ಅ.4 : ಮೈಸೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ‘ನಗರೋತ್ಥಾನ’ ಯೋಜನೆಯಡಿ ನೂರಾರು ಕೋಟಿ ರೂ ಅನುದಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಿಡಗಡೆಗೊಳಿಸಿತ್ತು, ಈ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಗೊಳಿಸಿದ್ದು ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಕಳಪೆ ಹಾಗೂ ಅಪೂರ್ಣವಾಗಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪಿಸಿದರು.

ಈ ಬಗ್ಗೆ ಸಾರ್ವಜನಿಕ ಜಾಗೃತಿ ಜಾಥವನ್ನು ಅ.6ರ ಬೆಳಗ್ಗೆ 11ಕ್ಕೆ  ಜೆ.ಎಸ್. ಎಸ್ ವಿದ್ಯಾಪೀಠದಿಂದ ಸೂಯೇಜ್ ಫಾರಂವರೆಗೆ ಮೆರವಣಿಗೆ ಮೂಲಕ ತೆರಳುತ್ತಾ ರಸ್ತೆಯುದ್ದಕ್ಕೂ ಗುಂಡಿಗಳಿಗೆ ಗಿಡ ನೆಡುವ ಮೂಲಕ ಕಾಂಗ್ರೆಸ್ ಸರ್ಕಾರದ ಕಮಿಷನ್ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನಗರೋತ್ಥಾನ ಯೋಜನೆಗೆ ಅಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದ್ದ ಅನುದಾನವನ್ನು ಇಂದಿನ ಕಾಂಗ್ರೆಸ್ ಸರ್ಕಾರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದು ನಗರದ ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದೆ, ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ನಗರದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ, ಜತೆಗೆ ಈ ಹಿಂದೆ ನೀಡಿದ ಅನುದಾನವನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ, ಹೀಗಾಗಿ ನಗರದ ಸಾರ್ವಜನಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಖೇಧ ವ್ಯಕ್ತಪಡಿಸಿದರು.

ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.1, 4,5,6,10,11, ಜೆ.ಎಸ್.ಎಸ್ ರಾಮಾನುಜ ರಸ್ತೆ ಮಾರ್ಗವಾಗಿ ಸ್ಯೂಯೇಜ್ ಫಾರಂವರೆಗೂ ಮುಂದುವರೆದಂತೆ ವಿದ್ಯಾರಣ್ಯಪುರಂ ಮುಖ್ಯ ರಸ್ತೆ ಮಾರ್ಗವಾಗಿ ಎನ್.ಐ ಇ ಕಾಲೇಜುವರೆಗೂ ರಸ್ತೆಯ ಸಮಗ್ರ ಅಭಿವೃದ್ಧಿಗಾಗಿ 10 ಕೋಟಿಗಳನ್ನು 2012-13ನೇ ಸಾಲಿನಲ್ಲಿ ಮಂಜೂರು ಮಾಡಲಾಗಿತ್ತು. ಸದರಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿದಿರುವುದಿಲ್ಲ, ಅಲ್ಲದೇ ಈ ಯೋಜನೆಯ 10 ಕೋಟಿ ರೂಪಾಯಿಗಳಲ್ಲಿ ಕೇವಲ 5.90 ಕೋಟಿ ರೂಗಳನ್ನು ಮಾತ್ರ ಖರ್ಚು ಮಾಡಿ ಕಾಮಗಾರಿಯನ್ನು ಅಪೂರ್ಣಗೊಳಿಸಿದೆ, ಅಲ್ಲದೇ ಉಳಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಬಿಜೆಪಿ ಸರ್ಕಾರ ಕೈಗೊಂಡಿದ್ದ 446 ಕಾಮಗಾರಿಗಳು ಇಂದಿಗೂ ನಡೆಯುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ರಾಜಕಾಲುವೆಗಳ ಅತಿಕ್ರಮ ತೆರವುಗೊಳಿಸಿ : ರಾಜಕಾಲುವೆಗಳ ಮೇಲೆ ನಡೆದಿರುವ ಅತಿಕ್ರಮಗಳನ್ನು ತೆರವುಗೊಳಿಸಿ ಹಾಗೂ ಹೂಳೆತ್ತುವ ಮೂಲಕ ಸರಾಗವಾಗಿ ಮಳೆ ನೀರನ್ನು ಹರಿಯುವಂತೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದ ಅವರು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಗರದ ಕನಕಗಿರಿ, ಶ್ರೀರಾಂಪುರ ಬಡಾವಣೆಗಳ ಮನೆಗಳಿಗೆ ನುಗ್ಗಿದ್ದ ನೀರು ಮನೆಯಲ್ಲಿದ್ದ ಬೆಲೆಬಾಳುವ ವಸ್ತು, ಪೀಠೋಪಕರಣ ಸೇರಿದಂತೆ ಲಕ್ಷಾಂತರ ರೂಗಳ ನಷ್ಟವುಂಟು ಮಾಡಿದ್ದು ಸರ್ಕಾರ ಈ ಕೂಡಲೇ ಆ ಸಂತ್ರಸ್ಥರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಯುವ ಮೋರ್ಚಾ ಪ್ರಧಾನ ಕಾಋಯದರ್ಶಿ ಕೆ.ಎಂ.ನಿಶಾಂತ್, ಸ್ಲಂ ಮೋರ್ಚಾ ಅಧ್ಯಕ್ಷ ವೈ.ವೆಂಕಟೇಶ್,  ಬಸವರಾಜು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: