ಮೈಸೂರು

ಮಹಿಳೆಯರ ಅಭ್ಯುದಯಕ್ಕೆ ಸಂವಿಧಾನ ತಿದ್ದುಪಡಿಯಾಗಬೇಕು: ಮಂಜುಳಾ ಮಾನಸ

ಮಹಿಳೆಯರ ಅಭ್ಯುದಯಕ್ಕಾಗಿ ಸಂವಿಧಾನ ತಿದ್ದುಪಡಿಯಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.

ಮೈಸೂರಿನ ರಂಗಾಯಣದ ಶ್ರೀರಂಗದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವತಿಯಿಂದ ಏರ್ಪಡಿಸಲಾದ ತ್ರಿವಳಿ ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆ ಕಾಯಿದೆಗಳ ಸುತ್ತಮುತ್ತ ಚರ್ಚೆಯಲ್ಲಿ ಪಾಲ್ಗೊಂಡ ಮಂಜುಳಾ ಮಾನಸ ಮಾತನಾಡಿದರು.

ತಲಾಖ್ ನಲ್ಲಿ ಹಲವು ದೋಷಗಳಿವೆ ಇದರಿಂದ ಮಹಿಳೆಯರು ಹೋರಾಟ ಆರಂಭಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಹಲವು ವಿಷಯಗಳು ನನ್ನ ಅನುಭವಕ್ಕೆ ಬಂದಿವೆ. ಅದರಿಂದ ಮಹಿಳೆಯರ ಅಭಿವೃದ್ಧಿಗೆ ಸಂವಿಧಾನ ತಿದ್ದುಪಡಿಯಾಗಬೇಕಿದೆ. ಜೊತೆಗೆ ಸಮಾನ ನಾಗರಿಕ ಸಂಹಿತೆಯನ್ನು ವಿವರವಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದರು. ಇಂದು ಸಮಾನ ನಾಗರಿಕ ಸಂಹಿತೆ ಮತ್ತು ತಲಾಖ್ ಕುರಿತಂತೆ ಧರ್ಮಾತೀತ, ಜಾತ್ಯಾತೀತ ಚರ್ಚೆಗಳು ನಡೆಯಬೇಕು ಎಂದು ತಿಳಿಸಿದರು.

ಇಸ್ಲಾಮಿಕ್ ವಿದ್ವಾಂಸ ಮೌಲಾನ ಅಯ್ಯೂಬ್ ಅನ್ಸಾರಿ ನದ್ವಿ ಮಾತನಾಡಿ, ಪತಿ ತನ್ನನ್ನು ಸರಿಯಾಗಿ ನೋಡಿಕೊಳ್ಳದಿರುವ ಸಂದರ್ಭ ಮಹಿಳೆ ತಲಾಖ್ ಪಡೆಯಬಹುದು. ಎಷ್ಟೋ ಮಹಿಳೆಯರು ತಲಾಖ್ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ನಾಗೇಂದ್ರಮೂರ್ತಿ, ಪಿಯುಸಿಎಲ್ ನ ಡಾ. ರತಿರಾವ್, ಡಾ. ಲಕ್ಷ್ಮಿನಾರಾಯಣ, ಸುಮನಾ, ಹೊರೆಯಾಲ ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: