ಮೈಸೂರು

ಭಕ್ತನ ಸೋಗಿನಲ್ಲಿ ಬಂದು ಕಳ್ಳತನ: ರೂ. 1.20 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು

photo-1ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚೇಗೌಡನ ಕೊಪ್ಪಲಿನಲ್ಲಿರುವ ಯಲ್ಲಮ್ಮ ದೇವಳದಲ್ಲಿ ಭಕ್ತನ ಸೋಗಿನಲ್ಲಿ ಬಂದ ದುಷ್ಕರ್ಮಿಯೋರ್ವ ದೇವರ ಮೈಮೇಲಿದ್ದ ಸುಮಾರು 1,20,000ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ 7.45 ರ ಸುಮಾರಿಗೆ ನಡೆದಿದೆ.

ಮಂಚೇಗೌಡನ ಕೊಪ್ಪಲಿನಲ್ಲಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಯಲ್ಲಮ್ಮ ದೇವಿಗೆ ತೊಡಸಿದ ಎರಡು ಕಣ್ಣುಗಳು, ಒಂದು ಮೂಗುತಿ, ಒಂದು ತಾಳಿ ಹಾಗೂ ಅದರ ಪಕ್ಕದಲ್ಲೇ ಇದ್ದ ಚಾಮುಂಡೇಶ್ವರಿ ದೇವಿಗೆ ತೊಡಿಸಿದ ಎರಡು ಕಣ್ಣುಗಳು, ಒಂದು ಮೂಗುತಿ, ಒಂದು ತಾಳಿ ಸೇರಿದಂತೆ ಒಟ್ಟು ಸುಮಾರು 35 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದೊಯ್ಯಲಾಗಿದೆ. ದೇವಳದ ಅರ್ಚಕಿ ಲಕ್ಷ್ಮಮ್ಮ ದೇವಳಕ್ಕಾಗಮಿಸಿದ ವೇಳೆ ದೇವರ ಮೈಮೇಲೆ ಯಾವ ಆಭರಣವೂ ಇರಲಿಲ್ಲ. ಇದರಿಂದ ಗಾಬರಿಗೊಂಡ ಲಕ್ಷ್ಮಮ್ಮ ಕೂಡಲೇ ವಿಜಯನಗರ ಠಾಣೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಭಕ್ತನ ಸೋಗಿನಲ್ಲಿ ದೇವಳಕ್ಕೆ ಆಗಮಿಸಿದ 25ರಿಂದ 30ರ ವಯೋಮಾನದ ಯುವಕನೋರ್ವ ಈ ಕಳ್ಳತನ ಕೃತ್ಯ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕಾಗಮಿಸಿದ ವಿಜಯನಗರ ಠಾಣೆ ಸಬ್ ಇನ್ಸಪೆಕ್ಟರ್ ಸತೀಶ್ ಅರಸ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.

ಸಬ್ ಇನ್ಸಪೆಕ್ಟರ್ ಸತೀಶ್ ದೇವಳಕ್ಕೆ ಬಂದು ಹೋಗುವವರ ಮೇಲೆ ನಿಗಾ ಇಡಲು ಅನುಕೂಲವಾಗುವಂತೆ ದೇವಳಕ್ಕೆ ಸಿಸಿಕ್ಯಾಮರಾ ಅಳವಡಿಸಲು ದೇವಳದ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದ್ದು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: