ಕರ್ನಾಟಕ

ಚಂದ್ರಶೇಖರ್ ಕೊಲೆ ಆರೋಪಿಗಳ ಬಂಧನ : ತಾಯಿಯನ್ನು ನಿಂಧಿಸಿದಕ್ಕೆ ಕೊಲೆ ಮಾಡಿದರಂತೆ

ಮಡಿಕೇರಿ ಅ.4 : ಮಡಿಕೇರಿ ನಗರ ದಸರಾ ಆಚರಣೆ ಸಂದರ್ಭ ನಡೆದ ಚಂದ್ರಶೇಖರ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಗಣಪತಿ ಬೀದಿಯ ನಿವಾಸಿ ಮೊಬೈಲ್ ಟೆಕ್ನೀಷಿಯನ್ ಅಬ್ದುಲ್ ರೋಷನ್ ರೆಹಮಾನ್(32), ಮಹದೇವಪೇಟೆಯ ನಿವಾಸಿ ಕಾರು ಚಾಲಕ ಮೊಹಮ್ಮದ್ ರಾಶಿದ್(34) ಮತ್ತು ಮಖಾನ್ ಗಲ್ಲಿ ನಿವಾಸಿ ಆಟೋ ಚಾಲಕ ನಜೀರ್ (28) ಎಂಬುವವರೆ ಬಂಧಿತ ಆರೋಪಿಗಳು.
ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಪಿ. ರಾಜೇಂದ್ರ ಪ್ರಸಾದ್, ಹತ್ಯಾ ಪ್ರಕರಣದ ಕುರಿತು ಮಾಹಿತಿ ನೀಡಿದರು. ಸೆ.30 ರಂದು ದಸರಾ ಉತ್ಸವದ ಸಂದರ್ಭ ನಗರದ ಕಾವೇರಿ ಬೇಕರಿ ಬಳಿ ಕ್ಷುಲ್ಲಕ ವಿಚಾರಕ್ಕೆ ರಾಶಿದ್, ಇಮ್ರಾನ್, ಶಂಷೀರ್ ಹಾಗೂ ಚಂದ್ರಶೇಖರ್ ನಡುವೆ ಕಲಹ ನಡೆದಿದೆ. ಈ ಸಂದರ್ಭ ಈ ಮಾರ್ಗವಾಗಿ ಬಂದ ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ ಹಾಗೂ ಸಾರ್ವಜನಿಕರು ಅವರನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದ್ದಾರೆ.

ನಂತರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಈದ್ಗಾ ಮೈದಾನದ ಬಳಿ ಅಬ್ದುಲ್ ರೋಷನ್ ರೆಹಮಾನ್, ರಾಶಿದ್, ನಜೀರ್, ಸಾಹುಲ್ ಹಮೀದ್, ಆಶಿಕ್, ರಿಜ್ವಾನ್, ಲತೀಫ್ ಒಂದೆಡೆ ಸೇರಿ ಗಾಂಜಾ ಮತ್ತು ಮದ್ಯ ಸೇವಿಸುತ್ತಾ ಕಾವೇರಿ ಬೇಕರಿ ಬಳಿ ನಡೆದ ಕಲಹದ ಬಗ್ಗೆ ರಾಶಿದ್‍ನ ಮೂಲಕ ಮಾಹಿತಿ ಪಡೆದು ಚರ್ಚಿಸಿದ್ದಾರೆ. ತಾಯಿಯನ್ನು ಬೈದಿದ್ದರು ಇಮ್ರಾನ್, ಚಂದ್ರಶೇಖರ್ ಜೊತೆಯಲ್ಲೆ ತಿರುಗುತ್ತಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.  ಚಂದ್ರಶೇಖರ್‍ಗೆ ಇಮ್ರಾನ್ ಬೆಂಬಲವಾಗಿ ನಿಂತ ಕಾರಣಕ್ಕಾಗಿ ಸ್ನೇಹಿತರಿಂದಲೇ ಹಲ್ಲೆಗೊಳಗಾಗುವ ಇಮ್ರಾನ್ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಎಲ್ಲರು ಪರಾರಿಯಾಗುತ್ತಾರೆ.
ನಂತರ ಮೃತ ಚಂದ್ರಶೇಖರನು ತನ್ನ ಸ್ನೇಹಿತರಾದ ರಾಶಿದ್, ಮುಸ್ತಫ, ರಿಜು, ಫಾಜಿಲ್, ಸಾಹುಲ್ ಹಮೀದ್, ನಜೀರ್, ಜಮೀರ್ ಹಾಗೂ ಕಲಂದರ್ ಅವರೊಂದಿಗೆ ಮಹದೇವಪೇಟೆಯ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಬಂದು ಸೇರುತ್ತಾರೆ. ಅಲ್ಲಿಗೆ ಬಂದ ರೋಷನ್ ಮತ್ತೆ ಜಗಳ ತೆಗೆದ ಸಂದರ್ಭ ಚಂದ್ರಶೇಖರನು ರೋಷನ್‍ನನ್ನು ತಳ್ಳುತ್ತಾನೆ. ಇದರಿಂದ ರೊಚ್ಚಿಗೆದ್ದ ರೋಷನ್, ಸ್ನೇಹಿತರಾದ ರಾಶಿದ್ ಹಾಗೂ ನಜೀóರ್ ಅವರ ಸಹಾಯದಿಂದ ತಾನು ತಂದಿದ್ದ ಚಾಕುವನ್ನು ಚಂದ್ರಶೇಖರನ ಕಿವಿಯ ಕೆಳ ಭಾಗಕ್ಕೆ ಚುಚ್ಚುತ್ತಾನೆ. ಈ ದೃಶ್ಯವನ್ನು ಕಂಡು ಜೊತೆಯಲ್ಲಿದ್ದವರು ಅಲ್ಲಿಂದ ಕಾಲ್ಕೀಳುತ್ತಾರೆ. ನಂತರ ರೋಷನ್ ತನ್ನ ದೊಡ್ಡಪ್ಪನ ಮಗ ಕಿಫಾಯತ್ತುಲ್ಲಾ ಅವರ ಹೊಟೇಲ್‍ಗೆ ತೆರಳಿದ ಮಾಹಿತಿ ಪೊಲೀಸ್ ತನಿಖಾ ತಂಡಕ್ಕೆ ಸಿಸಿ ಟಿವಿ ಮೂಲಕ ತಿಳಿದು ಬರುತ್ತದೆ.

ಈ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಸಂದರ್ಭ ಅಕ್ಟೋಬರ್ 4ರಂದು ಬೆಳಗ್ಗೆ 5.30 ಗಂಟೆಗೆ ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಅಬ್ದುಲ್ ರೋಷನ್ ರೆಹಮಾನ್ ಇರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ವೇಳೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದರೆಂದು ಎಸ್‍ಪಿ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಮೃತ ಚಂದ್ರಶೇಖರ್ ಕಳೆದ ಹಲವಾರು ವರ್ಷಗಳಿಂದ ತನ್ನ ಸ್ನೇಹಿತನಾಗಿದ್ದರು ತಾಯಿಗೆ ಬೈಯುತ್ತಿದ್ದ. ಇದನ್ನೇ ಕಾರಣವಾಗಿಸಿಕೊಂಡು ಆತನ ಮೇಲೆ ದ್ವೇಷ ಸಾಧಿಸಿ ದಸರಾ ದಿನ ಜನ ಜಂಗುಳಿಯಲ್ಲಿ ಕೊಲೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲವೆಂದು ಸಂಚು ರೂಪಿಸಿ ಹತ್ಯೆ ಮಾಡಿರುವುದಾಗಿ ರೋಷನ್ ತಿಳಿಸಿರುವುದಾಗಿ ಎಸ್‍ಪಿ ರಾಜೇಂದ್ರ ಪ್ರಸಾದ್ ಹೇಳಿದರು.

ಈತ ನೀಡಿದ ಮಾಹಿತಿಯನ್ನು ಆಧರಿಸಿ ಆರೋಪಿಗಳಾದ ರಾಶಿದ್ ಹಾಗೂ ನಜೀರ್‍ನನ್ನು ಬಂಧಿಸಲಾಗಿದೆಂ ಎಂದು ಎಸ್‍ಪಿ ತಿಳಿಸಿದರು.
ಡಿವೈಎಸ್‍ಪಿ ಕೆ.ಎಸ್.ಸುಂದರರಾಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಐ.ಪಿ. ಮೇದಪ್ಪ ಹಾಗೂ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಮಹೇಶ್ ಅವರ ನೇತೃತ್ವದಲ್ಲಿ ಮಡಿಕೇರಿ ನಗರ ಪಿಎಸ್‍ಐ ವೆಂಕಟರಮಣ, ಎಎಎಸ್‍ಐ ಕೆ.ವೈ.ಹಮೀದ್, ಎನ್.ಟಿ.ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ. ವೆಂಕಟೇಶ್, ಕೆ.ಸ್. ಅನಿಲ್ ಕುಮಾರ್, ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ದಿನೇಶ್, ಮುರುಳಿ, ಮಧು ಸೂದನ್, ಚಾಲಕರಾದ ಕೆ.ಎಸ್. ಶಶಿ ಕುಮಾರ್ ಹಾಗೂ ಬಿ.ಸಿ. ಶೇಷಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯ ವೈಖರಿ ಶ್ಲಾಘಿಸಿ ನಗದು ಬಹುಮಾನ ನೀಡುತ್ತಿರುವುದಾಗಿ ಎಸ್‍ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು. (ವರದಿ: ಕೆಸಿಐ, ಎಲ್.ಜಿ)

 

Leave a Reply

comments

Related Articles

error: