ಮೈಸೂರು

ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ಧ್ವಂಸಮಾಡಿದ ಆನೆ : ಜನಪ್ರತಿನಿಧಿಗಳು ರೈತರ ಹಿತಕಾಯುವಂತೆ ಸ್ಥಳೀಯರ ಒತ್ತಾಯ

ಮೈಸೂರು(ಪಿರಿಯಾಪಟ್ಟಣ)ಅ.5:- ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಜಮೀನಿಗೆ ಆನೆಗಳು ನುಗ್ಗಿ ರೈತರ ಬೆಳೆನಾಶ ಮಾಡುವುದಲ್ಲದೆ ಸೋಲಾರ್ ಬೇಲಿಗಳನ್ನು ಹಾನಿಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ದಾಳಿಯಿಂದ  ಲಕ್ಷಾಂತರೂ ಮೌಲ್ಯದ ಹಾನಿ ಸಂಭವಿಸಿದೆ.

ಪಿರಿಯಾಪಟ್ಟಣ  ತಾಲೂಕಿನ ಉತ್ತೇನಹಳ್ಳಿ ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಸೋಮವಾರ ರಾತ್ರಿ ಆನೆಗಳು ದಾಳಿಮಾಡಿ ರೈತರು ಬೆಳೆದಿದ್ದ ತೆಂಗಿನ ಮರ, ಭತ್ತದ ಗದ್ದೆ, ಜೋಳ ಸೇರಿದಂತೆ ಕಾವಲಿಗೆ ಹಾಕಿದ್ದ ಲಕ್ಷಾಂತರು ಮೌಲ್ಯದ ಸೋಲಾರ್ ಬೇಲಿಗಳನ್ನು ನಾಶಪಡಿಸಿದ್ದು, ರೈತರ ನಿದ್ದೆಗೆಡಿಸಿದೆ. ಉತ್ತೇನಹಳ್ಳಿ ಗ್ರಾಮದ ಸರ್ವೇ ನಂಬರ್ 9 ರಲ್ಲಿ ಕಮಲಮ್ಮ, ರಾಜು, ಭಾಗ್ಯಮ್ಮ, ಜಗದೀಶ್, ಪುಟ್ಟಮಹದೇವಪ್ಪ ಎಂಬುವವರಿಗೆ ಸೇರಿದ ಜಮೀನುಗಳ ಮೇಲೆ ರಾತ್ರಿ ದಾಳಿ ಮಾಡಿರುವ ಆನೆಗಳು ಕಮಲಮ್ಮನವರಿಗೆ ಸೇರಿದ 2  ತೆಂಗಿನ ಮರಗಳನ್ನು ಸಂಪೂರ್ಣ ನಾಶಗೊಳಿಸಿ ಸೋಲಾರ್ ಬೇಲಿ ಹಾಳುಮಾಡಿದೆ. ಜಗದೀಶ್ ಎಂಬುವವರಿಗೆ ಸೇರಿದ ಭತ್ತದ ಗದ್ದೆಯನ್ನು ತುಳಿದು ಹಾಳು ಮಾಡಿದೆ. ನವೀನ್ ಎಂಬುವವರಿಗೆ ಸೇರಿದ ಜೋಳದ ಗುಡ್ಡೆಯನ್ನು ತಿಂದುಮುಗಿಸಿವೆ. ರಾಜು, ಪುಟ್ಟಮಹದೇವಪ್ಪ ಎಂಬುವವರಿಗೆ ಸೇರಿದ ಸೋಲಾರ್ ಬೇಲಿಗಳನ್ನು ತುಳಿದು ಹಾಳು ಮಾಡಿವೆ. ಇದರಿಂದ ಸಾವಿರಾರು ರೂ ನಷ್ಟ ಅನುಭವಿಸಿರುವ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರು ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಸೋಲಾರ್ ಬೇಲಿಗಳನ್ನು ಲಕ್ಷಾಂತರೂ ಖರ್ಚು ಮಾಡಿ ನಿರ್ಮಾಣ ಮಾಡಿಕೊಂಡಿದ್ದು, ಇದೀಗ ಆನೆಗಳ ದಾಳಿಯಿಂದ ಸೋಲಾರ್ ಕಂಬಗಳು, ತಂತಿಗಳು ನಾಶವಾಗುತ್ತಿವೆ. ಇದನ್ನು ಸರಿಪಡಿಸಲು ಸಾವಿರಾರು ರೂಗಳ ಖರ್ಚು ಹಿಡಿಯುತ್ತಿದ್ದು ಬೆಳೆನಾಶಕ್ಕಿಂತ ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಬರುವವರಿಗೆ ದಿನ ಒಂದಕ್ಕೆ 700 ರೂಗೂ ಹೆಚ್ಚು ಕೂಲಿ ನೀಡಬೇಕು ಅದಲ್ಲದೆ  ಹಾಳಾದ ತಂತಿ, ಕಂಬ ಸರಿಪಡಿಸಲು ಅಧಿಕ ಖರ್ಚು ತಗುಲುತ್ತದೆ ಎಂದು ರೈತ ಶಿವಶಂಕರ್ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವ ಕಂದಕಗಳು ಮಳೆ, ಮಣ್ಣುಕುಸಿತ ಮುಂತಾದವುಗಳಿಂದ   ಸಂಪೂರ್ಣ ಮುಚ್ಚಿಹೋಗಿವೆ ಇದರಿಂದ ಆನೆಗಳು ಸರಾಗವಾಗಿ ಜಮೀನಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಇವುಗಳನ್ನು ಸರಿಪಡಿಸಬೇಕು ಅಲ್ಲದೆ ಹಲವಾರು ಬಾರಿ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣಕ್ಕೆ ಸರ್ವೆ ಮಾಡಿಕೊಂಡು ಹೋಗಲಾಗಿದೆ ಆದರೆ ಇದುವರೆಗೂ ಈಡೇರಿಲ್ಲ. ಆದ್ದರಿಂದ ಶೀಘ್ರದಲ್ಲಿ ರೈತರಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ರೀತಿ ಆನೆ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಅರಣ್ಯ ಇಲಾಖೆಗೆ ಅರ್ಜಿ ನೀಡಿ 2 ವರ್ಷ ಕಳೆದರೂ ಇಂದಿಗೂ ಪರಿಹಾರ ವಿತರಣೆಮಾಡಿಲ್ಲ ಕೇಳಿದರೆ ಅವರಿಲ್ಲ ಇವರಿಲ್ಲ ಎನ್ನುತ್ತಾರೆ. ಅಲ್ಲದೆ ದುಡ್ಡುಬಂದಿಲ್ಲ ಎಂಬ ಸಬೂಬು ಹೇಳುತ್ತಾರೆ ಎಂದು ರೈತ ನವೀನ್ ಆರೋಪಿಸುತ್ತಾರೆ.  ವಲಯ ಅರಣ್ಯಕ್ಕೆ ದೂರು ನೀಡಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ವನ್ಯ ಜೀವಿ ವಿಭಾಗ ಎನ್ನುತ್ತಾರೆ  ವಜ್ಯಜೀವಿ ವಿಭಾಗದವರು. ವಲಯ ಅರಣ್ಯದವರಿಗೆ ದೂರು ನೀಡಿ ಎನ್ನುತ್ತಾರೆ. ರೈತರು ಇದರಿಂದ ಗೊಂದಲಕ್ಕೆ ಒಳಗಾಗಿದ್ದೂ ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಟ್ರಂಚ್, ತಡೆಗೋಡೆ ನಿರ್ಮಾಣ ಮಾಡಿ ರೈತರ ಹಿತಕಾಯಲು ಮುಂದಾಗಬೇಕು ಈ ಬಗ್ಗೆ ಜನಪತ್ರಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.  (ಆರ್.ಬಿ.ಆರ್, ಎಸ್.ಎಚ್)

Leave a Reply

comments

Related Articles

error: