ಪ್ರಮುಖ ಸುದ್ದಿಮೈಸೂರು

ನನಗೆ ಮತ ಹಾಕಬೇಡಿ ಎಂದು ಹೇಳಲು ಸಿದ್ದರಾಮಯ್ಯ ಯಾರು: ವಿಶ್ವನಾಥ್ ವಾಗ್ದಾಳಿ

ಮೈಸೂರು, ಅ.೫: ಕುರುಬರು ವಿಶ್ವನಾಥ್‌ಗೆ ಮತ ಹಾಕಬೇಡಿ ಎಂದು ಹೇಳಲು ಮುಖ್ಯಮಂತ್ರಿ ಸಿದರಾಮಯ್ಯ ಯಾರು. ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿ ಹೇಳುವುದು ಪ್ರಜಾತಂತ್ರ ವಿರೋಧಿ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹುಣುಸೂರು ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ವಿಶ್ವನಾಥ್‌ಗೆ ಕುರುಬರು ಮತ ಹಾಕಬಾರದು ಎಂದು ಹೇಳಿದ್ದಾರೆ. ಈ ರೀತಿ ಹೇಳಲು ಇವರಿಗೆ ಯಾವ ಅಧಿಕಾರವಿದೆ. ನನಗೆ ಮತ ಹಾಕಬೇಡಿ ಎಂದು ಹೇಳುವುದಕ್ಕೆ ನಿಮ್ಮ ಬಳಿ ಯಾವ ಕಾರಣ ಇದೆ. ನನಗೇನು ಚುನಾವಣೆಗೆ ನಿಲ್ಲುವ ಅರ್ಹತೆ ಇಲ್ಲವೆ. ನೀವು ಜಾತಿ ಆಧಾರದ ಮೇಲೆ ಚುನಾವಣೆ ಮಾಡುತ್ತಿದ್ದೀರಿ. ಜನತಂತ್ರದ ವ್ಯವಸ್ಥೆಯಲ್ಲಿ ಮತ ಕೇಳಬೇಕು. ಇಂತವರಿಗೆ ಮತಹಾಕಬೇಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಾನು ಹೇಳಿದ್ದನ್ನು ಎಲ್ಲರು ಕೇಳಬೇಕು ಅಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಎಲ್ಲರೂ ನಿಮ್ಮ ಮಾತನ್ನು ಕೇಳುವ ಅಗತ್ಯವೂ ಇಲ್ಲ. ಮತದಾರರಿಗೆ ವಿವೇಚನೆ ಇದೆ. ನೀವು ಮತ ಹಾಕಬೇಡಿ ಎಂದು ಹೇಳಿದಾಕ್ಷಣ ನಿಮ್ಮ ಮಾತೇ ಅಂತಿಮವಲ್ಲ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್‌ನಿಂದ ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ ಆರಂಭವಾಗಿದೆ. ಆದರೆ ಅದು ಕೇವಲ ಮನೆಗಳಿಗಷ್ಟೆ ಸೀಮಿತವಾಗಿಲ್ಲ. ಮನಗಳಿಗೂ ಕುಮಾರಣ್ಣ ಲಗ್ಗೆ ಹಿಡಲಿದ್ದಾರೆ. ಕುಮಾರಣ್ಣನವರನ್ನು ಮನೆ ಮನಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಇದಕ್ಕಾಗಿ ನಾನೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಎಲ್ಲ ಕಾರ್ಯಕ್ರಮಗಳ ಮೂಲಕ ಜೆಡಿಎಸ್ ಜನರ ಬಳಿಗೆ ತೆರಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: