ಪ್ರಮುಖ ಸುದ್ದಿಮೈಸೂರು

ಆಜ್ಞೆ ಮತ್ತು ಆಧಿಪತ್ಯ ಬಿಟ್ಟು ವಿನಮ್ರರಾಗಿ ವರ್ತಿಸಿ: ನ್ಯಾ. ಮೊಹಮ್ಮದ್ ಮುಜೀರುಲ್ಲಾ ಸಿ.ಜಿ.

ಕುಟುಂಬದಲ್ಲಿ ಆಧಿಪತ್ಯ ಸ್ಥಾಪಿಸಿ ಆಜ್ಞೆಗಳನ್ನು ನೀಡುವ ಬದಲು ಹಿರಿಯ ನಾಗರಿಕರು ವಿನಮ್ರತೆಯಿಂದ ವರ್ತಿಸಿ ಸಹಕರಿಸಿದರೆ ಸಮಸ್ಯೆಗಳು ಉದ್ಭವಿಸದಂತೆ ತಡೆಗಟ್ಟಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮುಜೀರುಲ್ಲಾ ಸಿ.ಜಿ. ತಿಳಿಸಿದರು.

ಅವರು, ಕೆ.ಜಿ. ಕೊಪ್ಪಲಿನ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ, ಶನಿವಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಿ.ಜಿ.ಎಸ್. ಒಕ್ಕಲಿಗ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಕಾನೂನು ಅರಿವು – ನೆರವು ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿರಿಯ ಅನುಭವಿಗಳಿಗೆ ಕಾನೂನು ಅರಿವು ಎನ್ನುವುದಕ್ಕಿಂತ ಸಂವಾದ ಎನ್ನುವುದು ಅರ್ಥಪೂರ್ಣವಾಗಿರುತ್ತದೆ. ವಯಸ್ಸಿಗೆ ಹಿರಿತನವಿರಬಹುದು, ಆದರೆ ಯೋಚನೆ-ಮನಸ್ಸು ಸದಾ ಯೌವನಾವಸ್ಥೆಯಲ್ಲಿರಬೇಕು ಆಗ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಿ ಆತ್ಮವಿಶ್ವಾಸವೂ ಇಮ್ಮಡಿಯಾಗುವುದು ಎಂದು ಆಶಿಸಿದರು.

ಪೋಷಕರು ಹೊರೆ: ಪೋಷಕರು ಹೊರೆ ಎನ್ನುವ ಮನೋಭಾವ ಮತ್ತು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುವ ಇರಾದೆಯು ಯುವ ಸಮೂಹದಲ್ಲಿ ಹೆಚ್ಚುತ್ತಿದ್ದು, ಹಿರಿಯ ನಾಗರಿಕರು ನಿರ್ಲಕ್ಷ್ಯಕ್ಕೊಳಗಾಗಿ ಅವಿಭಕ್ತ ಕುಟಂಬಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಹಿರಿಯರ ಬುದ್ಧಿವಾದ ತಿಳುವಳಿಕೆ ಮಾತುಗಳು ಬೇಕಿಲ್ಲ. ತನ್ನ ಅಣತಿಯಂತೆ ಜೀವನ ಸಾಗಬೇಕು ಎನ್ನುವ ಹುಂಬತನ ಇಂದಿನ ಯುವಜನರಲ್ಲಿ ತುಸು ಹೆಚ್ಚೇ ಇದೆ. ಇಂತಹ ಕಲುಷಿತ ಸಾಮಾಜಿಕ ವಾತಾವರಣ ಸೃಷ್ಟಿಯಾಗಿದ್ದು ಹಿರಿಯರು ಅನುಭವಿಗಳು ಇದನ್ನು ಸಮತೂಗಿಸುವ ಜಾಣ್ಮೆ ಮೆರೆಯಬೇಕು. ಇದು ನನ್ನದು, ನಾನು ಎನ್ನುವ ಆಧಿಪತ್ಯ ಹಾಗೂ ಆಜ್ಞೆ ನೀಡುವುದನ್ನು ಕುಂಠಿತಗೊಳಿಸಿ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸಿ, ನಿಮ್ಮ ಉಪಸ್ಥಿತಿಯೂ ಅವರಲ್ಲಿ ಆತ್ಮವಿಶ್ವಾಸ ತುಂಬಲಿ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನಿಮ್ಮತನವನ್ನ ಬಿತ್ತಿರಿ, ಆಜ್ಞೆಗೂ ಹಾಗೂ ನಮ್ರತೆಗೂ ವ್ಯತ್ಯಾಸ ತಿಳಿದು ಸಂಬಂಧಗಳಲ್ಲಿ ಸಾಮರಸ್ಯ ಸ್ಥಾಪಿಸಿ ಸಮತೋಲನಗೊಳಿಸಿ. ಮನೆಯ ಇತರೆ ಸದಸ್ಯರಿಗೆ ನಿಮ್ಮ ಉಪಸ್ಥಿತಿ ಆನಂದ ಹಾಗೂ ನೆಮ್ಮದಿ ನೀಡಬೇಕು ಅಂತಹ ವಾತಾವರಣವನ್ನು ನೀವೇ ನಿರ್ಮಿಸಿ. ಅಹಂ ಬಿಟ್ಟು ಸ್ವಭಾವದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ತಂದು ಸುಖಕರ ಹಾಗೂ ಸಹಕಾರದ ಜೀವನ ರೂಢಿಸಿಕೊಳ್ಳಿ ಎಂದು ಕಿವಿ ಮಾತುಗಳನ್ನು ಹೇಳಿದರು.

ಮೂರ್ಖತನ: ಮಕ್ಕಳು ಅಷ್ಟು ಓದಿದ್ದಾರೆ, ಇಷ್ಟು ಓದಿದ್ದಾರೆ ವಿದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಬೀಗುವುದೇ ಶುದ್ಧ ಮೂರ್ಖತನ. ನಾವೆಷ್ಟೇ ಉನ್ನತ ವ್ಯಾಸಂಗ ಮಾಡಿರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ ನನ್ನ ಸೇವೆ ಭಾರತ ದೇಶಕ್ಕೆ ಮೀಸಲು ಎನ್ನುವ ಪ್ರೌಢಿಮೆಯ ಮನೋಭಾವನ್ನು ಮಕ್ಕಳಲ್ಲಿ ಮೂಡಿಸಿ ಸ್ವದೇಶ ವಸ್ತುಗಳ ಹಾಗೂ ದೇಶದ ಬಗ್ಗೆ ಅಭಿಮಾನ ಮೂಡಿಸಿ ಎಂದು ತಿಳಿಸಿದರು.

ನೇಗಿಲ ಯೋಗಿ ಮರುಳೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಮಹದೇವಯ್ಯ ಮಾತನಾಡಿ, ದೈಹಿಕ ಆರೋಗ್ಯ ಹೇಗೆ ಮುಖ್ಯವೂ ನೆಮ್ಮದಿಯುತ ಜೀವನಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ಕಾನೂನಿನ ಅರಿವು ಕೂಡ ಅತಿ ಮುಖ್ಯವೆಂದರು.

ಬಿ.ಜಿ.ಎಸ್. ಒಕ್ಕಲಿಗರ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಎಂ.ರಾಮು ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ದೇವೇಗೌಡ ಉಪಸ್ಥಿತರಿದ್ದರು. ಶೇ.80ರಷ್ಟು ಪ್ರಶ್ನೆಗಳು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗೆ ಸಂಬಂಧಪಟ್ಟವು. ಇವುಗಳಿಗೆ ಹಿರಿಯ ನ್ಯಾಯಾಧೀಶ ಮೊಹಮ್ಮದ್ ಮುಜೀರುಲ್ಲಾ ಸಿ.ಜಿ. ಹಾಗೂ ಹಿರಿಯ ವಕೀಲ ಮಾರಪ್ಪ ಸೂಕ್ತ ಉತ್ತರ ನೀಡುವ ಮೂಲಕ ಹಿರಿಯ ನಾಗರಿಕರ ಮನಸ್ಸಿನ ಗೊಂದಲಗಳಿಗೆ ತೆರೆ ಎಳೆದರು.

Leave a Reply

comments

Related Articles

error: