ಕರ್ನಾಟಕ

ವಾಲ್ಮೀಕಿಯವರು ನೀಡಿದ ಸಂದೇಶಗಳು ವರ್ತಮಾನದಲ್ಲಿಯೂ ಪ್ರಸ್ತುತ: ಪ್ರೊ.ಶಿವಾನಂದ ಕೆಳಗಿನಮನೆ

ಮಂಡ್ಯ, ಅ.6: ಮಹರ್ಷಿ ವಾಲ್ಮೀಕಿಯವರು ನೀಡಿದ ಸಂದೇಶಗಳು ವರ್ತಮಾನದಲ್ಲಿಯೂ ಪ್ರಸ್ತುತವಾಗಿದ್ದು, ಅವರ ಸಂದೇಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಶಿವಾನಂದ ಕೆಳಗಿನಮನೆ ಅವರು ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣವನ್ನು ಮಾಡಿ ಮಾತನಾಡಿದರು.

ಭಾರತೀಯ ಇತಿಹಾಸದಲ್ಲಿ ಆದಿ ಕವಿ, ಆದಿ ಗುರು ಹಾಗೂ ಆದಿ ಪುರುಷರೆಂದು ಮಹರ್ಷಿ ವಾಲ್ಮೀಕಿ ಅವರನ್ನು ಕರೆಯಲಾಗುವುದು. ಅವರಿಂದ ರಚಿತವಾದ ಮಹಾಕಾವ್ಯ ರಾಮಾಯಣ ಗ್ರಂಥ ಮಹನೀಯವಾದ ಕಲೆ ಹಾಗೂ ಜಾಗತೀಕ ಮಟ್ಟದಲ್ಲಿ ಗೌರವ ನೀಡದ ಕಾವ್ಯವಾಗಿದೆ ಎಂದು ತಿಳಿಸಿದ ಅವರು ಮಹರ್ಷಿ ವಾಲ್ಮೀಕಿ ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳು ಅಪಾರವಾದದ್ದು ಎಂದು ಅವರು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಅವರು ಉನ್ನತವಾದ ಸಮಾಜವನ್ನು ಕಟ್ಟಬೇಕು ಎಂಬ ಉದ್ದೇಶದಿಂದ ರಾಮಾಯಣ ಎಂಬ ಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿ ಮೌಲ್ಯ ಯುತವಾದ ಅಂಶಗಳು, ನೀತಿಗಳು ಹಾಗೂ ರಾಜಕೀಯ ಚಿಂತನೆಗಳು ಅಡಗಿವೆ ಎಂದು ತಿಳಿಸಿದ ಅವರು ರಾಮಾಯಣ ಕಾವ್ಯವನ್ನು ಓದಬೇಕು ಹಾಗೂ ಅಲ್ಲಿನ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಅವರಿಂದ ರಚಿತವಾದ ರಾಮಾಯಣವು ವಿನಯವಂತಿಕೆ, ಸಂಸ್ಕಾರ ಹಾಗೂ ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಹಾಗೂ ರಾಮಾಯಣದಲ್ಲಿ ಮಹಿಳೆಯರನ್ನು ನಾಯಕಿಯರಾಗಿ ಹಾಗೂ ಪೂಜ್ಯ ಭಾವನೆಯಲ್ಲಿ ಚಿತ್ರಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಡ್ಯ ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ಮನುಷ್ಯನ ಮನ ಪರಿವರ್ತನೆಯಾಗಲು ಮಹರ್ಷಿ ವಾಲ್ಮೀಕಿಯವರು ಅವರು ನೀಡಿದ ಸಂದೇಶಗಳು ಕಾರಣವಾಗಿದೆ. ಇತಿಹಾಸದಲ್ಲಿ ಮಹಿಳೆಯರ ಬಗ್ಗೆ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಇಂದು ಕೂಡ ಪುರುಷರು ಮಹಿಳೆಯರನ್ನು ಗೌರವಿಸಬೇಕು ಹಾಗೂ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಪಂಚಾತ್ ಅಧ್ಯಕ್ಷರಾದ ಜೆ.ಪ್ರೇಮಕುಮಾರಿ, ನಗರಸಭೆ ಅಧ್ಯಕ್ಷರಧ ಹೊಸಹಳ್ಳಿ ಬೋರೆಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುನಾವರ್ ಖಾನ್, ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹಾಗೂ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

ಮಹರ್ಷಿ ವಾಲ್ಮೀಕಿ ಜಯಂತಿ: ಅದ್ದೂರಿ ಮೆರವಣೆಗೆ

ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ಮೆರವಣೆಗೆಯಲ್ಲಿ ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿ ವಿವಿಧ ನೃತ್ಯ ಪ್ರಕಾರಗಳು ಪ್ರದರ್ಶಸಿದವು. ಹಾಗೂ ಈ ನೃತ್ಯ ಪ್ರಕಾರಗಳು ನೆರೆದಿದ್ದ ಜನರನ್ನು ಆಕರ್ಷಿಸಿತ್ತು. ಮೆರವಣೆಗೆಯು ನಗರ ಪ್ರಮುಖರಸ್ತೆಗಳಲ್ಲಿ ಸಂಚರಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಹಾಗೂ ಸಮುದಾಯ ಮುಖಂಡರುಗಳು ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: