ಕರ್ನಾಟಕ

ರಾಷ್ಟ್ರೀಯ ಹಬ್ಬಗಳ ಸಮಿತಿ ಆಚರಿಸುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರು : ತಾ.ಪಂ. ಅಧ್ಯಕ್ಷ ನಂಜುಂಡಯ್ಯ ಎಚ್ಚರಿಕೆ

ರಾಜ್ಯ(ಚಾಮರಾಜನಗರ)ಅ.6:- ಯಳಂದೂರು ತಾಲೂಕು ಮಟ್ಟದ ಪ್ರತಿ ಅಧಿಕಾರಿಗಳು ರಾಷ್ಟ್ರೀಯ ಹಬ್ಬಗಳ ಸಮಿತಿ ಆಚರಿಸುವ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ. ಈ ಬಗ್ಗೆ ಹಿಂದೆಯೂ ತಹಶೀಲ್ದಾರ್ ಅವರ ಗಮನಕ್ಕೆ ಈ ವಿಷಯ ತರಲಾಗಿದ್ದರೂ ಇದು ಮತ್ತೆ ಮರುಕಳಿಸುತ್ತಿರುವುದು ಖಂಡನೀಯ ಎಂದು ತಾ.ಪಂ. ಅಧ್ಯಕ್ಷ ನಂಜುಂಡಯ್ಯ ಎಚ್ಚರಿಕೆ ನೀಡಿದ್ದಾರೆ.

ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ಜಯಂತಿಗಳಲ್ಲೂ ನಡೆಯುವ ಕಾರ್ಯಕ್ರಮದಲ್ಲೂ ಇದು ಮರುಳಿಸುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಸರ್ಕಾರ ನಡೆಸುವ ಈ ಕಾರ್ಯಕ್ರಮಕ್ಕೆ ಬಾರದಿದ್ದರೆ ಇದಕ್ಕೆ ಅವಮಾನಿಸಿದಂತಾಗುತ್ತದೆ. ಮಹನೀಯರ ಜಯಂತಿ ಆಚರಣೆಯನ್ನು ಎಲ್ಲರಿಗೂ ಮಾರ್ಗದರ್ಶನ ನೀಡುವುದಕ್ಕಾಗಿಯೇ ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾವಂತರಾಗಿರುವ ಅಧಿಕಾರಿಗಳು ಇದಕ್ಕೆ ಹಾಜರಾಗದೆ ಇವರನ್ನು ಅವಮಾನಿಸುತ್ತಿದ್ದಾರೆ ಎಂದು ಆಪಾದಿಸಿದರು.

ಜಿ.ಪಂ. ಸದಸ್ಯ ಜೆ. ಯೋಗೇಶ್ ಮಾತನಾಡಿ, ವಾಲ್ಮೀಕಿ ಇಡೀ ಭಾರತ ಕಂಡ ಅತ್ಯಂತ ಶ್ರೇಷ್ಠ ಕವಿ, ದಾರ್ಶನಿಕರಾಗಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಪ್ರತಿ ಪಾತ್ರಗಳೂ ನಮ್ಮ ನಿತ್ಯ ಜೀವನದ ಒಂದೊಂದು ವ್ಯಕ್ತಿತ್ವವನ್ನು ಬೋಧಿಸುವಂತಿದೆ. ಇಂತಹ ಮಹಾನ್ ಗ್ರಂಥವು ವಿಶ್ವದೆಲ್ಲೆಡೆ ಮನ್ನಣೆ ಪಡೆದಿದ್ದು ವಾಲ್ಮೀಕಿ ಎಲ್ಲಾ ಜನಾಂಗಗಳಿಗೂ ಉತ್ತಮ ಸಂದೇಶ ನೀಡಿದ ಮಹಾನ್ ಪುರುಷರಾಗಿದ್ದಾರೆ. ಇವರ ಸನ್ಮಾರ್ಗ ಪ್ರಸ್ತುತಕ್ಕೆ ಅಗತ್ಯ ಎಂದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ನಡೆದ ಜಯಂತಿಗೆ ಉಪನೋಂದಣಾಧಿಕಾರಿ, ಭೂ ಮಾಪನ, ನೀರಾವರಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ಆರೋಗ್ಯ, ಪಂಚಾಯತ್ ರಾಜ್, ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳ, ನೌಕರರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಬೆಂಗಳೂರಿನಲ್ಲಿ ವಾಲ್ಮೀಕಿ ಮಹರ್ಷಿಯ ಪುತ್ಥಳಿ ಅನಾವರಣದ ನಿಮಿತ್ತ ಸಂಘಸಂಸ್ಥೆಗಳ ಪ್ರತಿನಿಧಿಗಳು ಸ್ಥಳೀಯರು ಭಾಗವಹಿಸದ ಕಾರಣ, ಕಾರ್ಯಕ್ರಮ ಸರಳವಾಗಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಯಾರೊಬ್ಬರೂ ಭಾಗವಹಿಸದಿರುವುದರಿಂದ ಅರ್ಧಗಂಟೆಯೊಳಗೆ ಮುಗಿಯಿತು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ. ಚಂದ್ರಮೌಳಿ, ತಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಮಹದೇವನಾಯಕ ಸದಸ್ಯರಾದ ವೈ.ಕೆ. ಮೋಳೆ ನಾಗರಾಜು, ನಿರಂಜನ್, ಸಿದ್ದರಾಜು, ಭಾಗ್ಯ , ಶಾರದಾಂಬ ಬಸವಣ್ಣ, ಪ.ಪಂ. ಅಧ್ಯಕ್ಷ ನಿಂಗರಾಜು, ಸದಸ್ಯೆ ನಾಗರತ್ನ ಸಮಾಜ ಕಲ್ಯಾಣಾಧಿಕಾರಿ ಮಹಾದೇವ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.  (ಜಿ.ಎನ್,ಎಸ್.ಎಚ್)

Leave a Reply

comments

Related Articles

error: