ಪ್ರಮುಖ ಸುದ್ದಿಮೈಸೂರು

ನಾನು ಕಾಂಗ್ರೆಸ್ ಸೇರುತ್ತಿರುವುದು ಶುದ್ಧ ಸುಳ್ಳು : ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ ;ಜಿ.ಟಿ.ದೇವೇಗೌಡ

ಮೈಸೂರು,ಅ.6:- ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಜೆಡಿಎಸ್ ನಲ್ಲಿ ಒಗ್ಗಟ್ಟು ಪ್ರದರ್ಶನಗೊಂಡಿದೆ.

ಮೈಸೂರು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಶಾಸಕ ಜಿ.ಟಿ.ದೇವೇಗೌಡ ಸುದ್ದಿಗೋಷ್ಠಿ ನಡೆಸಿದರು. ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ   ಮಾತನಾಡಿದ ಅವರು ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಶುದ್ದ ಸುಳ್ಳು, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದರು. ಸೋನಿಯ ಗಾಂಧಿ ವಿದೇಶಿ ಮಹಿಳೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜರೆದಿದ್ದರು.ಈಗ ಅವರ ಕೃಪಾಕಟಾಕ್ಷದಲ್ಲೇ ಆಡಳಿತ ನಡೆಸುತ್ತಿದ್ದಾರೆ. ಎಸ್ ಎಂ ಕೃಷ್ಣ ಅವರನ್ನು  ಟೀಕಿಸಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕವೇ ಕೈ ಪಾರ್ಟಿ ಸೇರಿದರು. ನೀವು ಎಲ್ಲಿಯ ಸಮಾಜವಾದಿ ? ನೀವು ದೇವಸ್ಥಾನಕ್ಕೆ ಹೋಗಿಲ್ವಾ?  ದೇವರ ಬಗ್ಗೆ ಮೂಢನಂಬಿಕೆ  ಅಂತೀರಾ. ಅಲ್ಲಾ ಸ್ವಾಮಿ ನೀವೂ ದೇಗುಲಕ್ಕೆ‌ ಹೋಗಿಲ್ವಾ.ಮೂಕಾಂಬಿಕಾ ದೇವಸ್ಥಾನದಲ್ಲಿ ಶರ್ಟೂ, ಎಲ್ಲಾ ಬಿಚ್ಚಿದ್ದೀರಿ. ಬರೀ ಮೈಯಲ್ಲಿ ಹೋಮ ಹವನ ಮಾಡಿಸಿದ್ದೀರಿ. ತಿರುಪತಿಗೆ ಹೋಗಿಲ್ವಾ ನೀವು.? ಕೇಳಿದರೆ ದೇವರನ್ನು ನಂಬಲ್ಲಾ ಅಂತೀರಲ್ಲ ಸ್ವಾಮಿ ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಯಾರನ್ನು ಬೆಳೆಸಿದ್ದೀರಿ? ನಿಮ್ಮ ಸಮಾಜದ ಯುವ ಮುಖಂಡರನ್ನೆ ನೀವು ಹೊಸಕಿ ಹಾಕಿದಿರಿ. ಕ್ಷೇತ್ರದಲ್ಲಿ 80 ಸಾವಿರ ಒಕ್ಕಲಿಗ, 40 ಸಾವಿರ ಕುರುಬ ,30 ಸಾವಿರ ಲಿಂಗಾಯತ,50 ಸಾವಿರ ದಲಿತ ಮತದಾರರಿದ್ದಾರೆ. ಯಾವ ಸಮುದಾಯಕ್ಕೆ ಏನು ಉಪಯೋಗ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ದಸರಾ ಮಹೋತ್ಸವದ ಉದ್ಘಾಟನೆ ಸಂದರ್ಭದಲ್ಲಿ ಪ್ರೊ.ನಿಸಾರ್ ಅಹಮದ್ ಅವರ ಜತೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕೂರುತ್ತೀರಿ. ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ನೀವು  ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೀರಿ. ನಿಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಯಾವ ಅಧಿಕಾರ ಕೊಟ್ಟಿದ್ದೀರಿ.  ಅವರಿಗೆ ಯಾವ ನಿಗಮ ಮಂಡಳಿ ಕೊಟ್ಟಿದ್ದೀರಿ. ಕನಿಷ್ಠ ಪಕ್ಷ ಅವರನ್ನು ಕರೆದು ಮಾತನಾಡಿಸಿದ್ದೀರ ? ನೀವು 1983ರಿಂದಲೂ ಶಾಸಕರಾಗಿದ್ದೀರಿ. ಆದರೆ ಇಷ್ಟು ಅವಧಿಯಲ್ಲಿ ಎಷ್ಟು ಕಾಲೇಜು ಕೊಟ್ಟಿದ್ದೀರಿ, ಎಷ್ಟು ಶಾಲೆ ಕೊಟ್ಟಿದ್ದೀರಿ ? ಬೇರೆ ಸಮುದಾಯಗಳು ಬೇಡ ಕುರುಬ ಸಮುದಾಯದ ಬೀದಿಗಳಿಗೆ ರಸ್ತೆ ರಿಪೇರಿ ಮಾಡಿಸಿದ್ದೀರಾ ಎಂದು ಪ್ರಶ್ನೆಗಳ ಮಳೆ ಸುರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಸಾ ರಾ ಮಹೇಶ್, ಮಾಜಿ ಸಂಸದ ಹೆಚ್ ವಿಶ್ವನಾಥ್,  ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: