ಕರ್ನಾಟಕಪ್ರಮುಖ ಸುದ್ದಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ: ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅ.6-ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಬೂತ್ ಸಮಿತಿ ರಚನೆ, ಬೂತ್ ಏಜೆಂಟರ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಹಾಗೂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಪೂರಕ ವಾತಾವರಣ ಇದೆ. ಅದನ್ನು ಎಲ್ಲರೂ ಸೇರಿ ಪರಿಣಾಮಕಾರಿಯಾಗಿ ಬಳಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಭಿನ್ನಮತ ನಿವಾರಣೆ ಪ್ರಯತ್ನವೂ ನಡೆದಿದೆ. ಇದಕ್ಕಾಗಿ ಜಿಲ್ಲೆಗಳಲ್ಲಿ ಸಮನ್ವಯ ಸಮಿತಿಗಳ ರಚನೆಯೂ ಆಗಿದೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶ. ಜನಪರ ಕಾರ್ಯಕ್ರಮಗಳ ಬಗ್ಗೆ ಜನರ ಮೆಚ್ಚುಗೆಯೂ ಇದೆ. ಇದರ ಜೊತೆಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸಾಧನೆ ವಿವರಿಸಿದರೆ ಕಾರ್ಯಕ್ರಮ ಯಶಸ್ವಿ ಆಗುತ್ತದೆ. ಶಾಸಕರೂ ಇದರಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸುವುದರ ಜೊತೆಗೆ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು ಎಂದರು.

ಪ್ರಧಾನಿ ಮೋದಿ ಅವರ ಬಾಯಿ ಬಡಾಯಿ, ಸಾಧನೆ ಶೂನ್ಯ. ಆದರೂ ಬಿಜೆಪಿಯವರು ಜನರಿಗೆ ಸುಳ್ಳು ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ನಾವು ಸುಳ್ಳು ಹೇಳುವ ಅಗತ್ಯ ಇಲ್ಲ. ಸರ್ಕಾರದ ಸಾಧನೆಗಳನ್ನು ತಿಳಿಸಿದರೆ ಸಾಕು. ಹೀಗಾಗಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಶಾಸಕರು ಹೆಚ್ಚು ಆಸಕ್ತಿ ವಹಿಸಬೇಕು. ಮನೆ ಮನೆಗೆ ತೆರಳಿ ಮತದಾರರ ನಾಡಿ ಮಿಡಿತ ಅರಿತರೆ, ಸರ್ಕಾರದ ಸಾಧನೆ ವಿವರಿಸಿದರೆ ಪಕ್ಷದ ಜೊತೆಗೆ ಶಾಸಕರಿಗೂ ಅನುಕೂಲ. ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲೂ ಸಿದ್ಧತೆ ಆಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುವುದರಿಂದ ಜನ ಸಹ ಖುಷಿಯಾಗಿದ್ದಾರೆ. ಸರ್ಕಾರದ ಕಾರ್ಯಕ್ರಮ ಎಲ್ಲಿಯೇ ನಡೆದರೂ ಜನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದರಿಂದ ನಮ್ಮ ಕೆಲಸ ಅವರಿಗೆ ಸಮಾಧಾನ ತಂದಿದೆ ಎನಿಸುತ್ತಿದೆ. ಈಗಿನ ವಾತಾವರಣ ನೋಡಿದರೆ ಯಾರು ಏನೇ ಹೇಳಿದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ಇನ್ನೂರರಷ್ಟು ಖಚಿತ ಎಂದು ಭವಿಷ್ಯ ನುಡಿದರು.

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

 

 

 

Leave a Reply

comments

Related Articles

error: