ದೇಶಪ್ರಮುಖ ಸುದ್ದಿವಿದೇಶ

ತಮಿಳುನಾಡು ರಾಜ್ಯಪಾಲರಾಗಿ ಬನವಾರಿ ಲಾಲ್ ಪುರೋಹಿತ್ ಪ್ರಮಾಣ ಸ್ವೀಕಾರ

ಚೆನ್ನೈ (ಅ.6): ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಬನವಾರಿ ಲಾಲ್ ಪುರೋಹಿತ್ ಅವರು ಇಂದು ಪ್ರಮಾಣ ಸ್ವೀಕರಿಸಿದ್ದಾರೆ. ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮದ್ರಾಸ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

2016ರಲ್ಲಿ ರಾಜ್ಯಪಾಲರಾಗಿದ್ದ ರೋಸಯ್ಯ ಅವರ ಅವಧಿ ಮುಕ್ತಾಯವಾದ ನಂತರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಮಿಳುನಾಡಿಗೆ ಪೂರ್ಣಪ್ರಮಾಣದ ರಾಜ್ಯಪಾಲರನ್ನು ನೇಮಿಸಿರಲಿಲ್ಲ. ಸರಿಸುಮಾರು ಒಂದು ವರ್ಷಕಾಲ ಮಹಾರಾಷ್ಟ್ರ ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ ರಾವ್ ಅವರಿಗೆ ತಮಿಳುನಾಡಿನ ಉಸ್ತುವಾರಿಯನ್ನೂ ವಹಿಸಲಾಗಿತ್ತು.

ತಮಿಳುನಾಡಿ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಅವರ ನಿಧನದ ಸಂದರ್ಭ ಉಂಟಾಗಿದ್ದ ರಾಜಕೀಯ ಗೊಂದಲದ ಸಂದರ್ಭದಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಪ್ರಸ್ತತು ತಮಿಳುನಾಡು ರಾಜ್ಯಪಾಲರಾಗಿ ನೇಮಕವಾಗಿರುವ ಪುರೋಹಿತ್‍ ಅವರು, 1977ರಲ್ಲಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅಸ್ಸಾ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ ಅನುಭವ ಅವರ ಜೊತೆಗಿದೆ.

ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರದಿಂದ 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪುರೋಹಿತ್ ಅವರು, ಎರಡು ಬಾರಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಒಂದು ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.

ಮಹಾರಾಷ್ಟ್ರ ವಿಧಾನಸಭೆಗೆ ನಾಗಪುರ ಪೂರ್ವ ಕ್ಷೇತ್ರದಿಂದ 1978ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 1980ರಲ್ಲಿ ನಾಗಪುರ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1982ರಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

1984ರಲ್ಲಿ ಲೋಕಸಭೆಗೆ ಆಯ್ಕೆಯಾದ ಪುರೋಹಿತ್ ಅವರು, 1989ರಲ್ಲಿ ಕಾಂಗ್ರೆಸ್ ಟಿಕೆಟ್‍ ಪಡೆದು ಪುನರಾಯ್ಕೆಯಾಗುವಲ್ಲಿ ಯಶಸ್ವಿಯಾದರು.

1996ರಲ್ಲಿ 11ನೇ ಲೋಕಸಭೆಗೆ ಬಿಜೆಪಿ ಟಿಕೆಟ್‍ ಪಡೆದು ಗೆದ್ದುಬಂದ ಪುರೋಹಿತ್ ಅವರು, ಗೃಹ ಇಲಾಖೆಯ ಸಂಸದೀಯ ಸಮಾಲೋಚನಾ ಸಮಿತಿ ಸದಸ್ಯರಾಗಿ, ರಕ್ಷಣಾ ಇಲಾಖೆ ಸ್ಥಾಯಿ ಸಮಿತಿ ಸದಸ್ಯರಾಗಿ, ಸಾರ್ವಜನಿಕ ಸ್ವಾಧೀನತಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

2003ರಲ್ಲಿ ವಿದರ್ಭ ರಾಜ್ಯ ಪಕ್ಷ ಸ್ಥಾಪಿಸಿದ ಪುರೋಹಿತ್ ಅವರು, ನಾಗಪುರ ಕ್ಷೇತ್ರದಿಂದ 2004 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

(ಎನ್‍ಬಿಎನ್/ಏಜೆನ್ಸಿ)

Leave a Reply

comments

Related Articles

error: