ಕರ್ನಾಟಕ

ಚಿನ್ನದ ಸರಗಳನ್ನು ಕಳವು ಮಾಡಿ ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಐನಾತಿ ಸರಗಳ್ಳರ ಬಂಧನ

ರಾಜ್ಯ(ಬೆಂಗಳೂರು) ಅ. 6:- ಒಂಟಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡಿ ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಐನಾತಿ ಸರಗಳ್ಳರೂ ಸೇರಿದಂತೆ 18 ಮಂದಿ ಆರೋಪಿಗಳನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು 3 ಕೆಜಿ 510 ಗ್ರಾಂ ಚಿನ್ನ ಸೇರಿ 1 ಕೋಟಿ 7 ಲಕ್ಷದ 14 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಗಾಯತ್ರಿ ನಗರದ ಹರ್ಷ (30) ಹಾಗೂ ಮಹೇಂದ್ರರಾವ್ (29) ಎಂಬ ಕುಖ್ಯಾತ ಸರಗಳ್ಳರನ್ನು ಬಂಧಿಸಿ 26 ಸರಗಳವು ಪ್ರಕರಣಗಳನ್ನು ಪತ್ತೆಹಚ್ಚಿ 1 ಕೆಜಿ 252 ಗ್ರಾಂ ತೂಕದ ಚಿನ್ನದ ಸರಗಳನ್ನು ಬಸವೇಶ್ವರನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಲಾಸಿ ಜೀವನಕ್ಕೆ ಮಾರು ಹೋಗಿದ್ದ ಇವರಿಬ್ಬರು ಸರಗಳ್ಳರು ಮತ್ತೊಬ್ಬನ ಜೊತೆ ಸೇರಿ ಬಸವೇಶ್ವರನಗರ, ವಿಜಯನಗರ, ಚಂದ್ರಲೇಔಟ್, ಮಲ್ಲೇಶ್ವರ, ರಾಜಾಜಿನಗರಗಳಲ್ಲಿ ಬೈಕ್‌ಗಳಲ್ಲಿ ಸುತ್ತಾಡುತ್ತ ಒಂಟಿ ಮಹಿಳೆಯರ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದರು.

ಕಳವು ಮಾಡಿದ ಸರಗಳನ್ನು ಕರಗಿಸಿ ಆರೋಪಿಗಳು ಮಾರಾಟ ಮಾಡುತ್ತಿದ್ದು, ಬಸವೇಶ್ವರನಗರದ ಸುತ್ತಮುತ್ತ ರಸ್ತೆಗಳಲ್ಲಿ ಪಲ್ಸರ್ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಆರೋಪಿಗಳ ಚಲನ-ವಲನಗಳನ್ನಾಧರಿಸಿದ ಪೊಲೀಸರು ಇಬ್ಬರನ್ನು ರೆಡ್‌ಹ್ಯಾಂಡಾಗಿ ಹಿಡಿದು ಜೈಲಿಗೆ ಕಳುಹಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಅವರು ತಿಳಿಸಿದರು. ಮನೆಯ ಬೀಗ ಮುರಿದು ಒಳ ನುಗ್ಗಿ ಕಳ್ಳತನ ಮಾ‌ಡಿದ್ದ ಲಗ್ಗೆರೆಯ ಸತೀಶ ಅಲಿಯಾಸ್ ಗೊಣ್ಣೆ ಎಂಬ ಕುಖ್ಯಾತ ಹಗಲು ಕನ್ನಗಳ್ಳನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿ 13 ಲಕ್ಷ 59 ಸಾವಿರ ಮೌಲ್ಯದ 452 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಬಸವೇಶ್ವರ ನಗರದ ಮನೆಯೊಂದರಲ್ಲಿ ಈ ಚಿನ್ನಾಭರಣಗಳನ್ನು ಕಳವು ಮಾಡಿದ್ದು, ಈತನ ಬಂಧನದಿಂದ ಬಸವೇಶ್ವರನಗರದ 11, ಮಹಾಲಕ್ಷ್ಮಿ ಲೇಔಟ್‌ನ 1 ಸೇರಿದಂತೆ 12 ಹಗಲು ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ. ಕಾಟನ್‌ಪೇಟೆ ಪೊಲೀಸರು ಜಹೀರ್ ಅಲಿಯಾಸ್ ಶಕೀಲ್ (36) ಎಂಬ ಕನ್ನಗಳ್ಳನನ್ನು ಬಂಧಿಸಿ ಕಾಟನ್‌ಪೇಟೆಯ ಓಲ್ಡ್ ಪೆಂಕ್ಷನ್ ಮೊಹಲ್ಲಾದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಭೇದಿಸಿ 8 ಲಕ್ಷ 20 ಸಾವಿರ ಮೌಲ್ಯದ 368 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಕಾಟನ್‌ಪೇಟೆಯ ವಿವಿಧೆಡೆ ನಡೆದಿದ್ದ 7 ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯನ್ನು ಕಾಟನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಉಪ್ಪಾರಪೇಟೆ ಪೊಲೀಸರು ಜನಸಂದಣಿ ಹೆಚ್ಚಾಗಿರುವ ಕಡೆಗಳಲ್ಲಿ ಮೊಬಲೈ ಕಳವು ಮಾಡುತ್ತಿದ್ದ ಭದ್ರಾವತಿಯ ರಾಘವೇಂದ್ರ (22), ಕಿರಣ್ (22), ಶ್ರೀನಿವಾಸ್ (37), ರವಿ (27), ಹರೀಶ್ (35), ಸುನೀಲ್ (23) ಹಾಗೂ ನೀಲಸಂದ್ರದ ಶಿವಮೂರ್ತಿ ಸೇರಿ 7 ಮಂದಿಯನ್ನು ಬಂಧಿಸಿ 6 ಲಕ್ಷ 50 ಸಾವಿರ ಮೌಲ್ಯದ ವಿವಿಧ ಕಂಪನಿಗಳ 57 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸಿಟಿ ಮಾರುಕಟ್ಟೆ, ಗಾಂಧಿ ಬಜಾರ್ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದರು ಎಂದು ತಿಳಿಸಿದರು. ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಸಂಚರಿಸುತ್ತ ಸಹ ಪ್ರಯಾಣಿಕರ ದುಬಾರಿ ಬೆಲೆಯ ವಸ್ತುಗಳನ್ನು ಕಳವು ಮಾಡುತ್ತಿದ್ದ ಸರ್ಜಾಪುರದ ರವಿ ಅಲಿಯಾಸ್ ಆದಿನಾರಾಯಣ (40), ಆನೇಕಲ್‌ನ ಮನುಕುಮಾರ್ ಅಲಿಯಾಸ್ ಮನು (29), ಶಂಕರ (38) ಸೇರಿ ಮೂವರನ್ನು ಬಂಧಿಸಿ 30 ಲಕ್ಷ 10 ಸಾವಿರ ಮೌಲ್ಯದ 1 ಕೆಜಿ 38 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಕಳವು ಮಾಡಿದ ಆಭರಣಗಳನ್ನು ಖರೀದಿಸಿ ಕೃತ್ಯಕ್ಕೆ ಪ್ರೇರೇಪಿಸುತ್ತಿದ್ದ ಚಿತ್ತೂರಿನ ರಮೇಶ್ ಆಚಾರಿ (42) ಎಂಬುವನನ್ನು ಬಂಧಿಸಲಾಗಿದೆ. ಆರೋಪಿಗಳು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಸುತ್ತ ಸಹ ಪ್ರಯಾಣಿಕರ ಚಿನ್ನಾಭರಣಗಳು, ನಗದು, ಬೆಲೆ ಬಾಳುವ ವಸ್ತುಗಳಿರುತ್ತಿದ್ದ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಉಪ್ಪಾರಪೇಟೆಯ 16, ಬ್ಯಾಟರಾಯನಪುರದ 1 ಸೇರಿದಂತೆ 17 ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ ಭದ್ರಾವತಿಯ ಪ್ರೇಮ್‌ಕುಮಾರ್ ಎಂಬ ಕಳ್ಳನನ್ನು ಇದೇ ಪೊಲೀಸರು ಬಂಧಿಸಿ ಜನಸಂದಣಿ ಇರುವ ಕಡೆಗಳಲ್ಲಿ ಬಸ್ ಪ್ರಯಾಣಿಕರ ಜೇಬುಗಳಿಂದ ನಗದು ಕಳ್ಳತನ ಮಾಡುತ್ತಿದ್ದ ಮೂರು ಪ್ರಕರಣಗಳನ್ನು ಭೇದಿಸಿ 2 ಲಕ್ಷ 25 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದುದ್ದಲ್ಲದೆ ಪ್ರಯಾಣಿಕರ ಬ್ಯಾಗ್‌ಗಳಿಂದ ಚಿನ್ನಾಭರಣಗಳಿಂದ ದೋಚುತ್ತಿದ್ದ ಶಿವಾಜಿನಗರದ ನಯಾಜ್ ಖಾನ್ (32), ನೀಲಸಂದ್ರದ ಆಸೀಫ್ ಹುಸೇನ್ (37)ನನ್ನು ಬಂಧಿಸಿ 12 ಲಕ್ಷ ಮೌಲ್ಯದ 400 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೆಂಪೇಗೌಡ ಬಸ್ ನಿಲ್ದಾಣದ ಪ್ರಯಾಣಿಕರ ಬ್ಯಾಗ್‌ಗಳಲ್ಲಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದುದ್ದಲ್ಲದೆ ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದರು ಎಂದು ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.  ಸಂದರ್ಭ ಡಿಸಿಪಿ ಚೇತನ್ ಸಿಂಗ್ ರಾತೋಡ್ ಇದ್ದರು.ಇದೇ ವೇಳೆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: