ಮೈಸೂರು

ಎಂಇಎಸ್ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ : ಕನ್ನಡ ವೇದಿಕೆ ಪ್ರತಿಭಟನೆ

ಎಂಇಎಸ್ ಕಾರ್ಯಕರ್ತರು ಗಡಿನಾಡು ಬೆಳಗಾವಿಯಲ್ಲಿ ಶಾಂತಿ ಕದಡುತ್ತಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಹಾಗೂ ಬೆಳಗಾವಿ ನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡಿ ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇದಿಕೆಯ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹಬ್ಬದ ದಿನ. ಅಂದು ಗಡಿನಾಡು ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಶಾಂತಿ ಕದಡಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಬೆಳಗಾವಿ ನಗರಪಾಲಿಕೆ ಪ್ರಥಮ ಪ್ರಜೆ ಇವರಿಗೆ ಸಾಥ್ ನೀಡಿದ್ದಾರೆ. ಇದು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹ ಎಂದು  ಆರೋಪಿಸಿದರು.

ಕರ್ನಾಟಕ ಸರಕಾರದ ಎಲ್ಲ ಸಂಪನ್ಮೂಲಗಳು ಮತ್ತು ಅನುದಾನಗಳನ್ನು ಬಳಸಿಕೊಳ್ಳಲಾಗುತ್ತಿದ್ದರೂ ರಾಜ್ಯೋತ್ಸವದಂದು  ಕನ್ನಡಕ್ಕೆ ಅಪಮಾನ ಮಾಡಿರುವುದು ಖಂಡನೀಯ. ಕೂಡಲೇ ಬೆಳಗಾವಿ ಪಾಲಿಕೆಯನ್ನು ಸೂಪರ್‍ಸೀಡ್ ಮಾಡಿ ಕನ್ನಡಪರ ಇರುವ ಆಡಳಿತಾಧಿಕಾರಿಯನ್ನು ನೇಮಿಸಿ ಎಂದು  ಆಗ್ರಹಿಸಿದರು.

ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಹಿಂದೆಯೂ ನಡೆದಿದೆ. ಆದರೂ ಪದೇ ಪದೇ ಪುಂಡಾಟಿಕೆ ನಡೆಸುವುದು ಸರಿಯಲ್ಲ. ಕೂಡಲೇ ಸರಕಾರ ಎಚ್ಚೆತ್ತು  ಜವಾಬ್ದಾರಿಯುತ ಪ್ರಥಮ ಪ್ರಜೆಯನ್ನು ನೇಮಿಸಬೇಕು. ಈ ರೀತಿಯ ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು  ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಎಂ.ಬಿ.ವಿಶ್ವನಾಥ್, ನಾಲಾಬೀದಿ ರವಿ, ಬನ್ನೂರು ಕೆ.ರಾಜು, ಬೋಗಾದಿ ಸಿದ್ದೇಗೌಡ, ರಾಧಾಕೃಷ್ಣ, ಪ್ಯಾಲೇಸ್‍ಬಾಬು, ಗೋಪಿ, ಗುರು, ಎಳನೀರು ಕುಮಾರ್, ಮಾಲಿನಿ, ಬೀಡಾಬಾಬು, ಶ್ಯಾಂಸುಂದರ್, ರಮೇಶ್ ಡೋಲು, ಸತೀಶ್, ಅರವಿಂದ್, ಧನಪಾಲ್ ಕುರುಬಾರಹಳ್ಳಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Leave a Reply

comments

Related Articles

error: