ಕರ್ನಾಟಕಪ್ರಮುಖ ಸುದ್ದಿ

ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ: ಅನಗತ್ಯ ಗೊಂದಲ ಸೃಷ್ಟಿ ಮಾಡದಿರಿ : ಕೆ.ಸಿ. ವೇಣು ಗೋಪಾಲ್

ರಾಜ್ಯ(ಬೆಂಗಳೂರು)ಅ.6:- ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ . ಈ ಬಗ್ಗೆ ಯಾರೂ ಅನಗತ್ಯ ಗೊಂದಲ ಸೃಷ್ಟಿ ಮಾಡದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಹೊಣೆ ಹೊತ್ತಿರುವ ಕೆ.ಸಿ. ವೇಣು ಗೋಪಾಲ್ ತುಸು ಖಾರವಾಗಿಯೇ ಹೇಳಿದ್ದಾರೆ.

ಮುಂದಿನ ಸಿಎಂ ಯಾರು? ಎಂಬ ಬಗ್ಗೆ ಪಕ್ಷದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದ ವೇಣು ಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಮ್ಮುಖದಲ್ಲಿ ಈ ಮಾತು ಹೇಳಿ ಗೊಂದಲಕ್ಕೆ ತೆರೆ ಎಳೆದರು. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗುತ್ತದೆ. ಸುಮ್ಮನೆ ಈಗಲೇ ನಾನೇ ಮುಖ್ಯಮಂತ್ರಿ, ಇವರೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವುದನ್ನು ಬಿಡಿ ಎಂದು ಅವರು ನೇರವಾಗಿಯೇ ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಟಾಂಗ್ ನೀಡಿದರು. ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲೇ ಎದುರಿಸಲಾಗುವುದು. ಈ ಬಗ್ಗೆ ಗೊಂದಲ ಬೇಡ. ಹೈಕಮಾಂಡ್ ಸಹ ಸಿದ್ಧರಾಮಯ್ಯ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು ಎಂದು ಸ್ಪಷ್ಟಪಡಿಸಿದೆ ಎಂದರು. ಕೆಲ ಶಾಸಕರು ಹಾಗೂ ಸಂಸದರು ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಪರವಿರೋಧ ಹೇಳಿಕೆಗಳನ್ನು ನೀಡುತ್ತಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ವೇಣುಗೋಪಾಲ್, ಮಾತು ನಿಲ್ಲಿಸಿ, ಮೊದಲು ಕೆಲಸ ಮಾಡಿ ಎಂದು ತುಸು ಸಿಟ್ಟಿನಿಂದಲೇ ಹೇಳಿದರು. ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಅನವಶ್ಯಕ ಗೊಂದಲ ಬೇಡ. ಮೊದಲು ಚುನಾವಣೆಗೆ ತಂತ್ರ ರೂಪಿಸಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪಕ್ಷ ಸಂಘಟನೆ ಕೆಲಸ ಬಿಟ್ಟು ಬೇರೆ ಮಾತನಾಡುವುದು ಬೇಡ. ನಾಲ್ಕು ವರ್ಷದಲ್ಲಿ ಮಾಡಿದ ಕೆಲಸವನ್ನು ಬಾಯಿಗೆ ಬಂದ ಹಾಗೆ ಮಾತನಾಡುವ ಮೂಲಕ ಹಾಳು ಮಾಡಬೇಡಿ ಎಂದರು. ಎಲ್ಲಾ ಗೊಂದಲಗಳಿಗೆ ಗುಡ್‌ಬೈ ಹೇಳಿ ಸಂಘಟನೆಗೆ ಗಮನ ನೀಡಿ ಎಂದು ಅವರು ಶಾಸಕರಿಗೆ ಕಿವಿ ಮಾತು ಹೇಳಿದರು. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಪ್ರತಿ ಶಾಸಕರ ಬಳಿಯೂ ಪ್ರತ್ಯೇಕ ಮಾಹಿತಿಯನ್ನು ಪಡೆದುಕೊಂಡ ವೇಣುಗೋಪಾಲ್, ಈ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ಬೇಡ. ಸಕ್ರೀಯರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕಿವಿ ಮಾತು ಹೇಳಿದರು. ಕೆಲ ಶಾಸಕರು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ತಾಳಿರುವ ದೂರುಗಳು ಬಂದಿವೆ. ಇದನ್ನು ಸಹಿಸುವುದಿಲ್ಲ. ಪ್ರತಿಯೊಬ್ಬ ಶಾಸಕರು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ಅವರು ಸೂಚನೆ ನೀಡಿದರು. ಶಾಸಕಾಂಗ ಪಕ್ಷದ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲು ಶಾಸಕರ ಜತೆ ಸಭೆ ನಡೆಸುತ್ತಿರುವುದಾಗಿ ಹೇಳಿದರು.

ಈ ಸಂದರ್ಭ  ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್, ದಿನೇಶ್‌ಗುಂಡೂರಾವ್, ಸಚಿವರುಗಳಾದ ಡಿ.ಕೆ. ಶಿವಕುಮಾರ್, ಟಿ.ಬಿ. ಜಯಚಂದ್ರ, ಕಾಗೋಡು ತಿಮ್ಮಪ್ಪ, ರಮೇಶ್‌ಕುಮಾರ್, ಡಾ. ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ, ರಮಾನಾಥ್‌ರೈ ಸೇರಿದಂತೆ ಎಲ್ಲಾ ಸಚಿವರು, ಕಾಂಗ್ರೆಸ್‌ನ ಬಹುತೇಕ ಶಾಸಕರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: