ಕರ್ನಾಟಕ

ದಲಿತರಿಗೆ ಕೃಷಿ ಭೂಮಿ ನೀಡುವಂತೆ ಒತ್ತಾಯ

ಸೋಮವಾರಪೇಟೆ, ಅ.6:ಕೂಡಿಗೆ ಸಮೀಪದ ಹಳೆಕೋಟೆ ಅಂದಾನಿಪುರ ಪೈಸಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವ ದಲಿತರಿಗೆ ಆ ಭೂಮಿಯನ್ನು ನೀಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು. ತಹಸೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಮ್ಮ ಒತ್ತಾಯ ಮಂಡಿಸಿದರು.

ಅಂದಾನಿಪುರದಲ್ಲಿ 100 ಎಕರೆ ಸರ್ಕಾರಿ ಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟಜಾತಿ ಕುಟುಂಬಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಆ ಜಾಗವನ್ನು ದಲಿತ ಕೃಷಿಕರಿಗೆ ನೀಡಬೇಕು ಎಂದು ದಲಿತ ಮುಖಂಡರುಗಳಾದ ಡಿ.ಎಸ್.ನಿರ್ವಾಣಪ್ಪ, ಮೆಣಸು ರಾಜಪ್ಪ, ಎಂ.ಪಿ.ಹೊನ್ನಪ್ಪ ಮತ್ತಿತರರು ಒತ್ತಾಯಿಸಿದರು. ಆ ಜಾಗವನ್ನು ಪೊಲೀಸ್ ಅಕಾಡೆಮಿ ಸ್ಥಾಪಿಸಲು ಸರ್ಕಾರ ಮೀಸಲಿಟ್ಟಿದೆ. ಜಾಗವನ್ನು ಹಂಚಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಹೇಳಿದರು. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಆ ಭೂಮಿಯನ್ನ ಕೃಷಿಕರಿಗೆ ನೀಡುವಂತೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು. ತಾಲೂಕಿನಲ್ಲಿ ಉಳ್ಳವರು ಒತ್ತುವರಿ ಮಾಡಿಕೊಂಡಿರುವ 6 ಸಾವಿರ ಎಕರೆ ಭೂಮಿಯನ್ನು ಸರ್ಕಾರ ತೆರವುಗೊಳಿಸಲು ಕ್ರಮಕೈಗೊಂಡಿದ್ದು, ತೆರವುಗೊಳಿಸಿದ ಭೂಮಿಯಲ್ಲಿ 3ಸಾವಿರ ಎಕರೆ ಭೂಮಿಯನ್ನು ಆದಿವಾಸಿಗಳಿಗೆ ಹಾಗು 3 ಸಾವಿರ ಎಕರೆಯನ್ನು ಪರಿಶಿಷ್ಟಜಾತಿ ಯವರಿಗೆ ತಲಾ ಮೂರು ಎಕರೆಯಂತೆ ಉಚಿತವಾಗಿ ಹಂಚಿ ಕೃಷಿ ಮಾಡಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಶನಿವಾರಸಂತೆ ನಾಡಕಚೇರಿಯಲ್ಲಿ ದಲಿತರು ಮತ್ತು ಬಡವರ ಶೋಷಣೆ ನಡೆಯುತ್ತಿದೆ. ಲಂಚ ನೀಡದೆ ಯಾವುದೇ ಕೆಲಸವಾಗುತ್ತಿಲ್ಲ. ಸರ್ಕಾರದ ಯೋಜನೆಯಂತೆ 94ಸಿ ಯಲ್ಲಿ ಹಕ್ಕುಪತ್ರ ಪಡೆಯಲು 15 ಸಾವಿರ ರೂ,ಗಳಿಂದ 20 ಸಾವಿರ ರೂ. ಲಂಚ ಕೇಳುತ್ತಿದ್ದಾರೆ ಎಂದು ಡಿ.ಎಸ್.ನಿರ್ವಾಣಪ್ಪ, ಮೆಣಸ ರಾಜಪ್ಪ, ಎಚ್.ಬಿ.ಜಯಮ್ಮ ಆರೋಪಿಸಿದರು. ಪ್ರಶ್ನೆ ಮಾಡಿದರೆ ದಲಿತರ ಸಲ್ಲಿಸಿದ ಕಡತಗಳೆ ಮಾಯವಾಗುತ್ತವೆ. ಕೆಲ ಗ್ರಾಮ ಸಹಾಯಕರು ಕೆಲ ಅಧಿಕಾರಿಗಳ ಏಜೆಂಟ್ ರಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ನಿರ್ವಾಣಪ್ಪ ಆರೋಪಿಸಿದರು.

ಸರ್ಕಾರದ ಯೋಜನೆಗಳನ್ನು ಪಡೆಯಲು ಲಂಚ ಕೊಡುವ ಅವಶ್ಯಕತೆಯಿಲ್ಲ. ಸಕಾಲದಲ್ಲಿ ಅರ್ಜಿ ಸಲ್ಲಿಸಿ, ನಿಗದಿತ ಸಮಯದಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಹಸೀಲ್ದಾರ್ ಸಭೆಗೆ ತಿಳಿಸಿದರು. ಶನಿವಾರಸಂತೆ ನಾಡಕಚೇರಿಯ ಬಗೆಗಿನ ಆರೋಪದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು. ಕಾಲೇಜು ವಿದ್ಯಾರ್ಥಿ ಯಡೂರಿನ ಸ್ವೀಕಾರ್ ಅವರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ದಲಿತ ಮುಖಂಡ ಜಯಪ್ಪ ಹಾನಗಲ್ ಒತ್ತಾಯಿಸಿದರು. ಸುದೀರ್ಘ ತನಿಖೆಯ ನಂತರ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಸಾಬೀತಾಗಿದೆ ಎಂದು ಡಿವೈಎಸ್‍ಪಿ ಸಂಪತ್ ಕುಮಾರ್ ಸಭೆಯ ಗಮನಕ್ಕೆ ತಂದರು.  ತಾಲೂಕಿನ ಬ್ಯಾಡಗೊಟ್ಟ, ಬಸವನಹಳ್ಳಿಯಲ್ಲಿರುವ ದಿಡ್ಡಳ್ಳಿ ಸಂತ್ರಸ್ಥರಿಗೆ, ಉಚಿತವಾಗಿ ಮೂರು ಎಕರೆ ಭೂಮಿಯನ್ನು ಸರ್ಕಾರ ನೀಡಬೇಕೆಂದು ನಿರ್ವಾಣಪ್ಪ ಒತ್ತಾಯಿಸಿದರು. ಸರ್ಕಾರದ ಯೋಜನೆಯಲ್ಲಿ ಮನೆ ನಿರ್ಮಿಸುವ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮರಳು ಪಡೆಯಲು ವಿಶೇಷ ರಿಯಾಯಿತಿ ನೀಡಬೇಕೆಂದು ದಸಂಸ ಜಿಲ್ಲಾ ಸಂಯೋಜಕ ಜೆ.ಆರ್.ಪಾಲಾಕ್ಷ ಒತ್ತಾಯಿಸಿದರು. ಎಸ್‍ಸಿ. ಎಸ್‍ಟಿ ಅವರ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಹಣ ವಿನಿಯೋಗವಾಗುತ್ತಿಲ್ಲ ಎಂದು ದಲಿತ ನಾಯಕ ಎಚ್.ಜೆ.ಹನುಮಯ್ಯ ದೂರಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ದಲಿತ ಮುಖಂಡ ಎಂ.ಪಿ.ಹೊನ್ನಪ್ಪ, ಲೋಕೋಪಯೋಗಿ ಎಇಇ ಮಹೇಂದ್ರ ಕುಮಾರ್, ಕೃಷಿ ಸಹಾಯಕ ನಿರ್ದೇಶಕ ಡಾ.ರಾಜಶೇಖರ್, ಪಪಂ ಮುಖ್ಯಾಧಿಕಾರಿ ನಾಚಪ್ಪ ಮತ್ತಿತರ ಅಧಿಕಾರಿಗಳು ಇದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: