ಕರ್ನಾಟಕ

ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

ಸೋಮವಾರಪೇಟೆ,ಅ.6: ಅಧುನಿಕ ಯುಗದಲ್ಲಿ ಸಂಸ್ಕಾರಯುಕ್ತ ಶಿಕ್ಷಣದ ಅನಿವಾರ್ಯತೆ ಇದೆ ಎಂದು ಕಲ್ಲು ಮಠದ ಮಹಾಂತ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶ್ರೀ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಡ್ಲಿಪೇಟೆಯ ಶ್ರೀ ಶಿವಕುಮಾರ ಸ್ವಾಮೀಜಿ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಾನಗಲ್ಲ ಕುಮಾರ ಮಹಾ ಶಿವಯೋಗಿಗಳ 150ನೇ ಜನ್ಮ ದಿನಾಚರಣೆ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವುಗಳು ಏನೆಲ್ಲಾ ಸಾಧಿಸಿರಬಹುದು. ಕಂಪ್ಯೂಟರಿಕರಣಗೊಂಡಿರಬಹುದು ಆದರೆ ಆಧ್ಯಾತ್ಮಿಕತೆ ಎಂಬುದು ನಿರಂತರ ಇದು ಅವಶ್ಯ ಕೂಡ. ನಮ್ಮ ಸಂಸ್ಕೃತಿ ಆಚಾರ, ವಿಚಾರ ಉಳಿಯಬೇಕಾಗಿದೆ. ಬೆಳೆಯಬೇಕಾಗಿದೆ ಆದ್ದರಿಂದ ಸಂಸ್ಕಾರ ಯುಕ್ತ ಶಿಕ್ಷಣದ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಅವರು 19ನೇ ಶತಮಾನದಲ್ಲಿ ಹಾನಗಲ್ಲು ಶ್ರೀ ಕುಮಾರ ಶಿವಯೋಗಿಗಳು ತಮ್ಮ ಮಠದಿಂದಲೇ ಶಿಕ್ಷಣ ಸಂಸ್ಥೆ ಆರಂಭಿಸಿ ಜಾತ್ಯಾತೀತವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಬೇಕೆಂದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವೆಲ್ಲಾ ಸಾಗುತ್ತಿದ್ದೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದ್ದಿನ ಕಟ್ಟೆ ಮಠಾಧಿಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ 19ನೇ ಶತಮಾನದಲ್ಲಿ ಶ್ರೀ ಕುಮಾರ ಶಿವಯೋಗಿಗಳು ಸಮಾಜದಲ್ಲಿ ನಡೆಯುತಿದ್ದ ಕಂದಾಚಾರ, ಅಸಮಾನತೆಯ ವಿರುದ್ಧ ಸಮರವನ್ನೇ ಸಾರಿದ್ದರು. ಮೇಲ್ವರ್ಗದವರ ತುಳಿತಕ್ಕೆ ಒಳಗಾಗಿದ್ದ ಕೆಳವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು. ಸಮಾಜದ ಎಲ್ಲಾ ಜನರು ಶಾಂತಿ ನೆಮ್ಮದಿಯಿಂದ ಬದುಕುವಂತಾಗಬೇಕೆಂದು ಆಶಿಸಿದರು.

ಮಹಾರಾಷ್ಟ್ರದ ಅಕ್ಕಲಕೋಟೆ ಮಠಾಧೀಶರಾದ ಶ್ರೀ ಚನ್ನಬಸವ ದೇವರು ಸ್ವಾಮೀಜಿ ಮಾತನಾಡಿ ಸಮಾಜದಲ್ಲಿ ಸುಧಾರಣೆ, ಸಮಾನತೆ, ಎಲ್ಲಾ ವರ್ಗದವರಿಗೂ ಶಿಕ್ಷಣದ ಕನಸನ್ನು ಹೊತ್ತು ಸಾಕಾರಗೊಳಿಸಿದ ಮಹಾನ್‍ಪುರುಷ ಶ್ರೀ ಕುಮಾರ ಶಿವಯೋಗಿಗಳು ಅವರ ಬದುಕೆ ಇಂದಿನ ಜನಾಂಗಕ್ಕೆ ಹಾಗೂ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಬೆಳಗಾಂ ಜಿಲ್ಲೆಯ ಹಿರೆಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆ ಬೂದಿಹಾಳ್ ಮಠದ ಶ್ರೀಸಂಗಮೇಶ್ವರ ದೇವರು ಸ್ವಾಮೀಜಿ, ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಯತೀಶ್, ಕೊಡಗುಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಪ್ರೇಮನಾಥ್, ಖಜಾಂಚಿ ಡಿ.ಬಿ.ಸೋಮಪ್ಪ, ಶಾಲಾ ಮುಖ್ಯೋಪಾಧ್ಯಾಯ ಅಭಿಲಾಷ್, ಪ್ರಮುಖರಾದ ಶಾಂತಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: