ಮೈಸೂರು

ಕರ್ನಾಟಕ ವಿಷನ್ 2025ರ ಸಭೆ : ಸರ್ವ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು (ಅ.6): ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಕ್ಟೋಬರ್ 7 ರಂದು ನವ ಕರ್ನಾಟಕ 2025 (ಕರ್ನಾಟಕ ವಿಷನ್) ಕಾರ್ಯಕ್ರಮ ಜಿಲ್ಲಾ ಪಂಚಾಯತ್ ಬೆಳಿಗ್ಗೆ 10 ಗಂಟೆಗೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು.

ಕರ್ನಾಟಕ ವಿಷನ್ 2025 ಯೋಜನೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 5 ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಪ್ರತಿ ತಂಡದಲ್ಲಿ 20 ಸದಸ್ಯರ ಗುಂಪನ್ನು ಆಯಾ ತಂಡದ ನೋಡಲ್ ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದು, ತಂಡದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರೇತರ ಸಂಘ ಸಂಸ್ಥೆಯವರು ಇರುತ್ತಾರೆ.

ಅಕ್ಟೋಬರ್ 7 ರಂದು ಕಾರ್ಯಕ್ರಮದ ಉದ್ಘಾಟನೆಯ ನಂತರ ಪ್ರತಿ ತಂಡವು ಪ್ರತ್ಯೇಕವಾಗಿ 2 ರಿಂದ 3 ಗಂಟೆಗಳ ಕಾಲ ವಿಷಾಯಾಧಾರಿತ ಚರ್ಚೆ ನಡೆಸಲು ಅವಕಾಶ ನೀಡಲಾಗುವುದು. ಚರ್ಚೆಯ ನಂತರ ವಿಷಯ ಮಂಡಿಸಲು ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಾಕಾಶ ನೀಡಲಾಗುವುದು. ಇದರಲ್ಲಿ 15 ನಿಮಿಷ ಪಿಪಿಟಿ ಪ್ರೆಸೆಂಟೇಷನ್ ನಂತರ 5 ನಿಮಿಷ ಅದೇ ವಿಚಾರವಾಗಿ ಚರ್ಚೆ ಮಾಡಲು ಸಮಯ ನೀಡಲಾಗುತ್ತದೆ. ಅಂತಿಮವಾಗುವ ನಿರ್ಧಾರವಾಗುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್ 7 ರಂದು ಕಾರ್ಯಕ್ರಮದಲ್ಲಿ ಈ ಮೇಲ್ ಮುಖಾಂತರ ಬಂದಿರುವ ಮನವಿಗಳು, ಸ್ಥಳದಲ್ಲೇ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡುವ ವಿಚಾರಗಳು ಸೂಕ್ತವಾಗಿದ್ದರೆ ಅವುಗಳನ್ನು ಸಹ ಚರ್ಚೆಗೆ ಪರಿಗಣಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಟಿ ಯೋಗೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
(ಎನ್‍ಬಿಎನ್‍)

Leave a Reply

comments

Related Articles

error: