ಮೈಸೂರು

ಬಡವರು ಬಡವರಾಗಿಯೇ ಉಳಿದಿದ್ದು ಧನಿಕರು ಮತ್ತಷ್ಟು ಶ್ರೀಮಂತರಾಗಿದ್ದಾರೆ: ಜಗದೀಶ್

ಸ್ವರಾಜ್ಯ ಬಂದು 70 ವರ್ಷಗಳೇ ಕಳೆದರೂ ದೇಶದ ಆರ್ಥಿಕತೆ ಸುಧಾರಣೆಯಾಗಿಲ್ಲ. ಸಂಪನ್ಮೂಲದ ಕೇಂದ್ರೀಕರಣದಿಂದಾಗಿ ಕಳೆದು 70 ವರ್ಷಗಳಲ್ಲಿ ಉದ್ಯೋಗ ರಹಿತ ಅಭಿವೃದ್ಧಿಯಾಗಿ ಬಡವರು ಬಡವರಾಗಿಯೇ ಉಳಿದಿದ್ದು ಧನಿಕರು ಮತ್ತಷ್ಟು ಶ್ರೀಮಂತರಾಗಿದ್ದಾರೆ ಎಂದು ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಜಗದೀಶ್ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ನಂಜುಮಳಿಗೆಯಲ್ಲಿರುವ ಗೋಪಾಲಸ್ವಾಮಿ ಶಿಶುವಿಹಾರ ಪಿಯು ಕಾಲೇಜಿನಲ್ಲಿ ಸ್ವದೇಶಿ ಜಾಗರಣ ಮಂಚ್ ಹಾಗೂ ಜನಚೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ವದೇಶಿ ಜಾಗರಣ ಮಂಚ್ ಹಾಗೂ ಮುದ್ರಾ ಬ್ಯಾಂಕ್ ಪರಿಚಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸಂಪತ್ತಿನ ಸಮಾನ ಹಂಚಿಕೆಯಾಗದೆ ಶ್ರೀಮಂತರು ಬಡವರ ನಡುವಿನ ಅಂತರ ಹೆಚ್ಚಾಗಿದೆ. ಸರ್ಕಾರದ ಯೋಜನೆಗಳು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತಿವೆ. ಸರ್ಕಾರಗಳು ಜನರಿಗೆ ಬೇಕಿರುವ ಉದ್ಯೋಗವನ್ನು ಸೃಷ್ಟಿ ಮಾಡುವ ಬದಲು ಜನರನ್ನು ಸೋಂಬೇರಿಗಳನ್ನಾಗಿ ಮಾಡುವ ಅನ್ನಭಾಗ್ಯ, ತಾಳಿಭಾಗ್ಯ, ಶಾದಿಭಾಗ್ಯ, ಸೈಕಲ್ ಭಾಗ್ಯಗಳನ್ನು ನೀಡುತ್ತಿವೆ ಎಂದು ಹೇಳಿದರು.

ತೆಂಡೂಲ್ಕರ್ ನೇತೃತ್ವದ ಸಮಿತಿಯ ವರದಿಯ ಪ್ರಕಾರ ದೇಶದ ಶೇ.7೦ರಷ್ಟು ಜನತೆಯ ಆದಾಯ ಕೇವಲ 2೦ ರೂ. ಮಾತ್ರ. ಯುಪಿಎ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಟಾಟಾ, ಬಿರ್ಲಾ, ಅಂಬಾನಿ, ಇನ್ಫೋಸಿಸ್ ಕಂಪನಿಗೆ 25 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದೆ. ಆದರೆ ರೈತರಿಗೆ ನೀಡಿರುವುದು ಕೇವಲ 55 ಸಾವಿರ ಕೋಟಿ ಮಾತ್ರ. ದೇಶದಲ್ಲಿ ಸೃಷ್ಟಿಯಾಗುವ ಉದ್ಯೋಗದಲ್ಲಿ ಶೇ.65ರಷ್ಟು ಸ್ವಯಂ ಉದ್ಯೋಗವಾದರೆ, ಟಾಟಾ, ಅಂಬಾನಿ, ಬಿರ್ಲಾ ಕಂಪನಿಗಳು ಶೇ.3ರಷ್ಟು ಹಾಗೂ ಸರ್ಕಾರ ಕೇವಲ ಶೇ.3ರಷ್ಟು ಉದ್ಯೋಗ ಸೃಷ್ಟಿ ಮಾಡುತ್ತವೆ. ಆದರೆ, ಬ್ಯಾಂಕುಗಳು ಹಾಗೂ ಸರ್ಕಾರ ಕೇವಲ 3ರಷ್ಟು ಉದ್ಯೋಗ ಸೃಷ್ಟಿಸುವವರಿಗೆ ಲಕ್ಷಾಂತರ ಕೋಟಿ ಸಾಲ ನೀಡುತ್ತಿದ್ದು, ಶೇ.65ರಷ್ಟು ಉದ್ಯೋಗ ಸೃಷ್ಟಿಸುವವರನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿ ಕಾರಿದರು.

ವಿಜಯ್‌ಮಲ್ಯ 9 ಸಾವಿರ ಕೋಟಿ ಸಾಲ ಮಾಡಿ ಪಂಗನಾಮ ಹಾಕಿ ವಿದೇಶದಲ್ಲಿ ಆರಾಮಗಿದ್ದಾರೆ. ಆದರೆ ರೈತ ಕೇವಲ 1 ಲಕ್ಷ ಸಾಲ ಮಾಡಿದರೂ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ದೇಶದಲ್ಲಿ ಇದುವರೆಗೆ 3 ಲಕ್ಷದ 16 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕೃಷಿ ನಾಶ. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಜನಸಂಖ್ಯೆಯ ಶೇ.83ರಷ್ಟು ಮಂದಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಇಂದು ಕೃಷಿ ಸರ್ವನಾಶವಾಗುತ್ತಿದ್ದು ದೇಶದ ಅಭಿವೃದ್ಧಿಗೆ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ದೇಶದ ಅಭಿವೃದ್ಧಿಗಾಗಿ ಮುದ್ರಾ ಬ್ಯಾಂಕ್ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಧನ ಸಹಾಯ ನೀಡುತ್ತಿದ್ದು ಇದರ ಸದುಪಯೋಗಪಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ್ ಮಂಚ್ ಸಂಯೋಜಕ ಎನ್.ಆರ್.ಮಂಜುನಾಥ್, ಲೀಡ್ ಬ್ಯಾಂಕ್‌ನ ಆರ್ಥಿಕ ಸಲಹೆಗಾರ ರಾಮನಾಥ್, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ ಸೇರಿದಂತೆ ಇನ್ನಿತರರು ಇದ್ದರು.

Leave a Reply

comments

Related Articles

error: