ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಮಳೆ ಅವಾಂತರ : ಬಲಿಗಾಗಿ ಕಾದು ಕುಳಿತಿವೆ ಗುಂಡಿಗಳು

ರಾಜ್ಯ(ಬೆಂಗಳೂರು)ಅ.7:- ಕಳೆದ ಹಲವು ದಿನಗಿಳಿಂದ ಎಡೆ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಹಾನಗರಿ ಬೆಂಗಳೂರು ತತ್ತರಿಸಿ ಹೋಗಿದೆ. ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಎಲ್ಲೆಂದರಲ್ಲಿ ರಸ್ತೆಗಳಲ್ಲಿನ ಗುಂಡಿಗಳು ಬಾಯಿ ತೆರೆದುಕೊಂಡು ಬಲಿಗಾಗಿ ಕಾದು ಕುಳಿತಿವೆ.

ಮಳೆಯಿಂದ ನಗರದ ರಸ್ತೆಗಳೆಲ್ಲಾ ಮೃತ್ಯು ಕೂಪಗಳಾಗಿ ಪರಿವರ್ತನೆ ಗೊಂಡಿದ್ದು ರಸ್ತೆಗಳನ್ನು ಮುಚ್ಚುವ ಯಾವುದೇ ಕೆಲಸಕ್ಕೆ ಮಹಾನಗರ ಪಾಲಿಕೆ ಮುಂದಾಗಿಲ್ಲ. ಇದು ಸಾರ್ವಜನಿಕರ ಕಡುಕೋಪಕ್ಕೆ ಗುರಿಯಾಗುವಂತೆ ಮಾಡಿದೆ. ರಸ್ತೆ ಗುಂಡಿ ಮುಚ್ಚುವ ಫೈಥಾನ್ ಯಂತ್ರಗಳು ಕಾಣೆಯಾಗಿವೆ. ಮತ್ತೊಂದೆಡೆ ಗುಂಡಿ ಮುಚ್ಚಲೆಂದೇ 4.2 ಕೋಟಿ ರೂಪಾಯಿ ಹಣವನ್ನು ಪಾಲಿಕೆ ಬಿಡುಗಡೆ ಮಾಡಿದ್ದು ಆ ಹಣ ಎಲ್ಲಿ ಹೋಯಿತು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಮಳೆ ಬಿದ್ದ ಹಿನ್ನೆಲೆಯಲ್ಲಿ ನಗರದ ಅನೇಕ ಕಡೆದ ರಸ್ತೆಗುರುಳಿ ಬಿದ್ದಿರುವ ಮರಗಳನ್ನು ತೆರವು ಮಾಡದೆ ಹಾಗೆ ಪಕ್ಕಕ್ಕೆ ಸರಿಸಲಾಗಿದೆ. ಉದ್ಯಾನವನಗಳಲ್ಲಿ ಮುರಿದು ಬಿದ್ದಿರುವ ಮರಗಳನ್ನು ತೆರವು ಮಾಡುವ ಕೆಲಸ ಮಾಡುವದಲ್ಲಿ ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದೆ.

ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಗುಂಡಿಗಳು ದಿನೇ ದಿನೇ ಮೃತ್ಯುಕೂಪಗಳಾಗಿವೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತ ಪರಿಣಾಮ ಹಲವಾರು ಕಡೆಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ.ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 16 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳು ಸೃಷ್ಟಿಯಾಗಿವೆ. ಮಳೆಯಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ವಿಳಂಬವಾಗುತ್ತಿದೆ ಎಂಬುದು ಅಧಿಕಾರಿಗಳ ವಾದವಾಗಿದೆ.

ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿಯೇ ಬಿಬಿಎಂಪಿ ‘ಪೈಥಾನ್ 5000’ ಯಂತ್ರಕ್ಕೆ ವಾರ್ಷಿಕ 4.5 ಕೋಟಿ ವ್ಯಯಿಸುತ್ತಿದೆ. ಆದಾಗ್ಯೂ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ. ಅಮೆರಿಕ ರಸ್ತೆ ತಂತ್ರಜ್ಞಾನ ಮತ್ತು ಪರಿಹಾರ ಸಂಸ್ಥೆ ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಫೈಥಾನ್ ಯಂತ್ರಗಳು ಎಲ್ಲಿಗೆ ಹೋಗಿವೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ವಾರ್ಡ್ ಮಟ್ಟದ ಕಾಮಗಾರಿಗಳ ಪಟ್ಟಿಯಲ್ಲಿ ಶೇ.20ರಷ್ಟು ಅನುದಾನವನ್ನು ಗುಂಡಿ ಮುಚ್ಚಲೆಂದೇ ಮೀಸಲಿಡಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಗುಂಡಿ ಮುಚ್ಚಲು ಒಟ್ಟು 4.2 ಕೋಟಿ ನೀಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಪೈಥಾನ್ ಯಂತ್ರವೂ ಗುಂಡಿ ಮುಚ್ಚುತ್ತಿದ್ದರೆ, ಇನ್ನೊಂದೆಡೆ ಗುಂಡಿ ಮುಚ್ಚಲು ಪಾಲಿಕೆಯೂ ಹಣ ಬಿಡುಗಡೆ ಮಾಡುತ್ತಿದೆ. ಆದಾಗ್ಯೂ ನಗರದ ರಸ್ತೆಗಳಲ್ಲಿ ಗುಂಡಿಗಳು ಮಾತ್ರಕಡಿಮೆಯಾಗಿಲ್ಲ. ಪೈಥಾನ್ ಯಂತ್ರಕ್ಕೆ ನೀಡುತ್ತಿರುವ ಕೋಟ್ಯಂತರ ರೂಪಾಯಿ ವ್ಯರ್ಥವಾಗುತ್ತಿದೆ ಹೊರತು ರಸ್ತೆಗುಂಡಿಗಳು ಮಾತ್ರ ಕಡಿಮೆಯಾಗುತ್ತಿಲ್ಲ  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: