ದೇಶಪ್ರಮುಖ ಸುದ್ದಿ

ದೇಶದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ : ಪ್ರಧಾನಿ ನರೇಂದ್ರ ಮೋದಿ

ದೇಶ(ನವದೆಹಲಿ)ಅ.7:- ದೇಶದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಜಿಎಸ್‌ಟಿ ದರ ಇಳಿಕೆಯಿಂದ ದೇಶದಲ್ಲಿ ದೀಪಾವಳಿಗೂ ಮುನ್ನವೇ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಎರಡು ದಿನಗಳ ಭೇಟಿಗೆ ಗುಜರಾತ್‌ಗೆ ಆಗಮಿಸಿದ ಪ್ರಧಾನಿ ಶನಿವಾರ ದ್ವಾರಕಾದಿಶ್ ದೇವಾಲಯಕ್ಕೆ ಭೇಟಿ ನೀಡಿ, ಕೃಷ್ಣಾ ದೇವಾಲಯವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಒಕ್ಲಾ ಮತ್ತು ದ್ವಾರಕಾ ವಲಯದಲ್ಲಿ ನಾಲ್ಕು ಮಾರ್ಗದ ಕೇಬಲ್ ಆಧಾರಿತ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮೀನುಗಾರರ ಸಬಲೀಕರಣಕ್ಕೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ. ಜಿಎಸ್‌ಟಿ ಜಾರಿ ಮಾಡುವಾಗ ಇದರ ಬಗ್ಗೆ ಮೂರು ತಿಂಗಳು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆವು. ಇದೀಗ ಕೂಲಂಕಷ ಪರಿಶೀಲನೆ ನಡೆಸಿ ಜಿಎಸ್‌ಟಿ ಸಮಿತಿಯಲ್ಲಿ ಚರ್ಚಿಸಿ ದರ ಇಳಿಕೆ ಮಾಡಿದ್ದೇವೆ. ಇದು ಜನರು ನೀಡಿದ ಸಲಹೆಯನ್ನು ಪರಿಗಣಿಸಿ ಮಾಡಿರುವ ಬದಲಾವಣೆಯಾಗಿದೆ ಎಂದು ಹೇಳಿದರು. ಮೀನುಗಾರರು ಬಡತನದಲ್ಲಿ ಮುಂದುವರಿಯಬಾರದು ಎಂಬುದು ಸರ್ಕಾರದ ಇಚ್ಛೆಯಾಗಿದೆ. ಅವರಿಗೆ ಇನ್ನಷ್ಟು ಸವಲತ್ತುಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ ಅವರು, ಸಮುದ್ರ ನೀತಿಯ ಕುರಿತು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಸಮುದ್ರ ಭದ್ರತಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ದ್ವಾರಕಾದ ದೇವಭೂಮಿಯಲ್ಲಿ ಸಂಸ್ಥೆಯೊಂದನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಬಂದರು ಮತ್ತು ಬಂದರು ಆಧಾರಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೀಲಿ ಆರ್ಥಿಕತೆ ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿ ಪ್ರತ್ಯೇಕವಾಗಿ ಇರಬಾರದು. ಗಿರ್ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಅವರನ್ನು ದ್ವಾರಕಾದ ಇತರ ಕಡೆಗಳಿಗೂ ಆಕರ್ಷಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ದ್ವಾರಕಾಕ್ಕೆ ಬಂದ ಕೂಡಲೆ ನನಗೆ ವಿಭಿನ್ನ ಅನುಭವವಾಗುತ್ತಿದೆ ಮತ್ತು ಅತ್ಯುತ್ಸಾಹ ಉಂಟಾಗುತ್ತಿದೆ ಎಂದು ಹೇಳಿದರು, ಇಲ್ಲಿ ಸಂಪರ್ಕ, ರಸ್ತೆ ಸೇರಿದಂತೆ ಮೂಲಸೌಕರ್ಯ ಕೊರತೆಯಿಂದಾಗಿ ಪ್ರವಾಸೋದ್ಯಮ ಕುಂಠಿತಗೊಂಡಿದೆ. ಆದ್ದರಿಂದ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಭಾರತದತ್ತ ವಿಶ್ವದ ಗಮನ ಹರಿಯುತ್ತಿದೆ. ಇಲ್ಲಿ ಹೂಡಿಕೆ ಮಾಡಲು ಹೆಚ್ಚೆಚ್ಚು ಜನರು ಮುಂದೆ ಬರುತ್ತಿದ್ದಾರೆ. ಇರದಿಂದ ಭಾರತೀಯರಿಗೆ ಒಳ್ಳೆಯ ಅವಕಾಶ ದೊರೆಯುತ್ತದೆ. ಗುಜರಾತ್ ರಾಜ್ಯ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದೆ. ಇದಕ್ಕಾಗಿ ನಾನು ಗುಜರಾತನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: