ಕರ್ನಾಟಕ

ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಮನುಷ್ಯನ ಜೀವನದ ಪ್ರತಿ ಹಂತದಲ್ಲಿಯೂ ಪ್ರಭಾವ ಬೀರುತ್ತವೆ : ಡಾ.ಹೆಚ್.ಡಿ.ಉಮಾಶಂಕರ್

ರಾಜ್ಯ(ಮಂಡ್ಯ)ಅ.7:- ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಮನುಷ್ಯನ ಜೀವನದ ಪ್ರತಿ ಹಂತದಲ್ಲಿಯೂ ಪ್ರಭಾವ ಬೀರುತ್ತವೆ. ಹಾಗಾಗಿ ಎರಡೂ ಗ್ರಂಥಗಳನ್ನು ಅತ್ಯಂತ ಶ್ರೇಷ್ಠ ಗ್ರಂಥಗಳು ಎಂದು ಕರೆಯಲಾಗುತ್ತದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಹೆಚ್.ಡಿ.ಉಮಾಶಂಕರ್ ಹೇಳಿದರು.

ಕೆ.ಆರ್.ಪೇಟೆ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಕೆಳವರ್ಗದ ಹಿನ್ನೆಲೆಯಲ್ಲಿ ಬಂದ ವಾಲ್ಮೀಕಿ ಅವರು ರಾಮಾಯಣವನ್ನು ಮತ್ತು ವ್ಯಾಸರು ಮಹಾಭಾರತವನ್ನು ಬರೆದರು. ಶೋಷಿತರಿಗೆ ಉನ್ನತ ಸಾಧನೆ ಮಾಡುವ ಸತತ ಪರಿಶ್ರಮದಿಂದ ಅಧ್ಯಯನ ಮಾಡುವ ಮೂಲಕ ಶೋಷಣೆಯಿಂದ ಮುಕ್ತಿ ಪಡೆಯಬೇಕು ಎಂದು ಛಲವನ್ನು ಹೊಂದಿರುತ್ತಾರೆ. ಇದರಿಂದಾಗಿ ತಳಸಮುದಾಯ ವಾಲ್ಮೀಕಿ ರಾಮಾಯಣ ಗ್ರಂಥವನ್ನು ರಚಿಸಲು ಸಾಧ್ಯವಾಗಿದೆ. ಯಾವುದೇ ವ್ಯಕ್ತಿಯ ಅಕ್ಷರಜ್ಞಾನವನ್ನು ಜಾತಿಯ ಆಧಾರದಲ್ಲಿ ಅಳೆಯಬಾರದು. ಜ್ಞಾನ ಯಾರ ಸ್ವತ್ತೂ ಅಲ್ಲ ಎಂಬುದಕ್ಕೆ ದಿವ್ಯ ನಿದರ್ಶನ ಮಹಾಕವಿ ವಾಲ್ಮೀಕಿ. ಇಂತಹ ಸಂತರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಿದೆ. ವಿಶ್ವಮಾನವರನ್ನು ಜಾತಿಯ ಸಂಕೋಲೆಗಳಿಂದ ಬಂಧಿಸಬಾರದು. ವಾಲ್ಮೀಕಿಯವರು ಬರೆದ ಮಹಾಕಾವ್ಯ ರಾಮಾಯಣವು ಎಲ್ಲಾ ವರ್ಗಗಳ ಒಳಿತಿಗೆ ಕಾರಣೀಭೂತವಾಗಿದೆ. ವಾಲ್ಮೀಕಿ ಮಹರ್ಷಿಗಳು ನಾಯಕ ಸಮುದಾಯಕ್ಕೆ ಸೇರಿದ್ದಾರೆಂಬ ಕಾರಣಕ್ಕೆ ಕೇವಲ ನಾಯಕ ಸಮುದಾಯದವರು ಒಂದೆಡೆ ಸೇರಿ ಅವರ ಜಯಂತಿಯನ್ನು ಆಚರಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಬದಲಾಗಿ ಸರ್ವ ಸಮುದಾಯಗಳು ಒಟ್ಟಾಗಿ ಮಹಾತ್ಮರ ಜಯಂತಿ ಕಾರ್ಯಗಳನ್ನು ಆಚರಿಸಬೇಕು. ರತ್ನಾಕರ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಮಹಾತ್ಮರು ಕಠಿಣ ತಪಸ್ಸನ್ನು ಆಚರಿಸುತ್ತಿದ್ದಾಗ ಅವರ ದೇಹದ ಮೇಲೆ ಹುತ್ತ ಬೆಳೆಯುತ್ತದೆ. ಈ ಹುತ್ತಕ್ಕೆ ಸಂಸ್ಕೃತ ಪದದಲ್ಲಿ ವಾಲ್ಮೀಕಿ ಎಂದು ಕರೆಯಲಾಗುತ್ತದೆ ಎಂದು ಉಲ್ಲೇಖಿಸಿದ ಅವರು ರಾಮಾಯಣವನ್ನು ಜೀವನದ ಮಾರ್ಗದರ್ಶವಾಗಿಟ್ಟುಕೊಳ್ಳಬೇಕು. ಮನುಕುಲದ ಸರ್ವತೋಮುಖ ಅಭಿವೃದ್ದಿಗೆ ವಾಲ್ಮೀಕಿ ಸಮುದಾಯದ ಕೊಡುಗೆ ಅನನ್ಯ ಎಂದು ಹೇಳಿದರು.

ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಹಸೀಲ್ದಾರ್ ಕೆ.ರತ್ನಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ, ಸದಸ್ಯರಾದ ಬಿ.ಎಲ್.ದೇವರಾಜು, ರಾಮದಾಸ್, ಹೆಚ್.ಟಿ.ಮಂಜು, ತಾ.ಪಂ ಉಪಾಧ್ಯಕ್ಷ ಜಾನಕಿರಾಮ್, ಸದಸ್ಯರಾದ ರಾಜು, ವಿಜಯಲಕ್ಷ್ಮೀ, ದೀಪಶ್ರೀಮಂಜೇಶ್, ತಾ.ಪಂ.ಇಓ ಚಂದ್ರಮೌಳಿ, ಬಿಇಒ ಕೆ.ಬೆಟ್ಟನಾಯಕ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: