
ಕರ್ನಾಟಕ
ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
ರಾಜ್ಯ(ಬೆಂಗಳೂರು)ಅ.7:- ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಹೆಚ್.ಆರ್.ಬಿ.ಆರ್ ಲೇಔಟ್ನಲ್ಲಿ ನಡೆದಿದೆ.
ಕಮರ್ಷಿಯಲ್ ಸ್ಟ್ರೀಟ್ನ ಗಿಫ್ಟ್ ಸೆಂಟರ್ವೊಂದರಲ್ಲಿ ಪ್ಯಾಕಿಂಗ್ ಮಾಡುತ್ತಿದ್ದ ರಾಮಾಂಜನಪಾಂಡೆ (53) ಮೃತಪಟ್ಟವರು. ರಾತ್ರಿ ಕೆಲಸ ಮುಗಿಸಿಕೊಂಡು ಹೆಚ್.ಆರ್.ಬಿ.ಆರ್ ಲೇಔಟ್ನ 2ನೇ ಬ್ಲಾಕ್ನ ಮನೆಗೆ ಮಳೆಯಲ್ಲಿ ನೆನೆದುಕೊಂಡು ಹೋಗಿದ್ದಾರೆ.
ಹಾಕಿಕೊಂಡಿದ್ದ ರೈನ್ಕೋಟ್ ಮಳೆಗೆ ತೊಯ್ದಿದ್ದರಿಂದ ಅದನ್ನು ಮನೆಯ ಹೊರಗಿನ ತಂತಿ ಮೇಲೆ ಒಣ ಹಾಕಲು ಹೋದಾಗ ಅದಕ್ಕೆ ವಿದ್ಯುತ್ ತಂತಿ ತಗುಲಿದ್ದು, ತಂತಿ ಸ್ಪರ್ಶಿಸಿದ ರಾಮಾಂಜನಪಾಂಡೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ರಾಮಾಂಜನ, ಸಣ್ಣ ಪ್ರಮಾಣದ ಶಾಕ್ಗೆ ಮೃತಪಟ್ಟಿದ್ದು, ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)