ಕರ್ನಾಟಕಪ್ರಮುಖ ಸುದ್ದಿ

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ನಾಲ್ವರು ರೈತರಿಗೆ ಡಾ.ಜಿ.ಕೆ.ವೀರೇಶ್ ದತ್ತಿನಿಧಿ ಪ್ರಶಸ್ತಿ ಪ್ರದಾನ

ಬೆಂಗಳೂರು, ಪ್ರಮುಖ ಸುದ್ದಿ (ಅ.7) : ಅಲುಮ್ನಿ ಅಸೋಸಿಯೇಷನ್ – ಕೃಷಿ ವಿಶ್ವದ್ಯಾನಿಲಯದ ವತಿಯಿಂದ ಡಾ.ಜಿ.ಕೆ. ವೀರೇಶ್ ದತ್ತಿನಿಧಿ ಅಂಗವಾಗಿ, ಹೆಬ್ಬಾಳ ಕೃಷಿವಿಶ್ವವಿದ್ಯಾನಿಲಯದಲ್ಲಿ ಇಂದು ಏರ್ಪಡಿಸಿದ್ದ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್.ಸದಾನಂದ, ರಾಯಚೂರು ಜಿಲ್ಲೆಯ ರಾಮಕೃಷ್ಣ ಶವಟ್ಟಿ, ಶಿವಮೊಗ್ಗ ಜಿಲ್ಲೆಯ ದುರ್ಗಪ್ಪ ಅಂಗಡಿ ಹಾಗೂ ಉಡುಪಿ ಜಿಲ್ಲೆಯ ಶಬರೀಶ ಸುವರ್ಣ ಇವರುಗಳಿಗೆ ತಲಾ ರೂ. 25,000 ಗಳನ್ನೊಳಗೊಂಡ ಪ್ರಶಸ್ತಿ ಪದಕದೊಂದಿಗೆ ಗೌರವಿಸಲಾಯಿತು.

ಅಸಲುಮ್ನಿ ಅಸೋಸಿಯೇಷನ್ ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಪ್ರತಿ ವರ್ಷ ನೀಡಲಾಗುವ ಪ್ರಶಸ್ತಿಗೆ ಕೃಷಿಕರನ್ನು ಆಯ್ಕೆ ಮಾಡಲು ನಾಲ್ಕು ವಿಭಾಗಗಳಲ್ಲಿ ಸಮಿತಿಗಳನ್ನು ರಚಿಸುವ ಮೂಲಕ ರಾಜ್ಯದ ನಾನಾ ಭಾಗಗಳಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿ, ವಿವಿಧ ಬೆಳೆಗಳನ್ನು ಬೆಳೆದು, ಅಲ್ಪ ನೀರು ಬಳಕೆ, ಯಂತ್ರೋಪಕರಣ ಬಳಕೆ, ಕಡಿಮೆ ವೆಚ್ಚ ಹೀಗೆ ಉತ್ತಮ ಪದ್ಧತಿಗಳನ್ನು ಅನುಸರಿಸಿ ಹೈನುಗಾರಿಕೆ, ಪಶುಸಂಗೋಪನೆ, ಜೇನು ಸಾಕಣೆ, ವಿವಿಧ ಬೆಳೆಗಳಾದ ಸಿರಿಧಾನ್ಯ, ತೆಂಗು, ಮಾವು, ಅಡಿಕೆ, ಮೆಣಸು, ತರಕಾರಿ ಹೀಗೆ ವರ್ಷ ಪೂರ್ತಿ ಆದಾಯ ಬರುವಂತಹ ಕಡಿಮೆ ಖರ್ಚಿನ ಬೆಳೆ ಬೆಳೆಯುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಒಟ್ಟು ಕುಟುಂಬದ ಸದಸ್ಯರೆಲ್ಲರೂ ದುಡಿಯುವುದು, ಇತರೆ ರೈತರಿಗೆ ಸಮಗ್ರ ಕೃಷಿ ಬಗ್ಗೆ ತಿಳುವಳಿಕೆ ಮೂಡಿಸುವುದು, ತರಬೇತಿ ಏರ್ಪಡಿಸುವುದು ಸೇರಿದಂತೆ ಕೃಷಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಾಧನೆ ಮಾಡಿದ ರಾಜ್ಯದ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಡಾ.ನಾರಾಣಗೌಡ, ಅಧ್ಯಕ್ಷರು, ಅಲುಮ್ನಿ ಅಸೋಸಿಯೇಷನ್, ಬೆಂಗಳೂರು ಅವರು ವಹಿಸಿದ್ದರು. ತುಮಕೂರು ಜಿಲ್ಲೆಯ ಲೋಕಸಭಾ ಸದಸ್ಯರಾದ ಎಸ್.ಪಿ. ಮುದ್ದಹನುಮೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಾಮರಾಜನಗರ ಲೋಕಸಭಾ ಸದಸ್ಯರಾದ ಆರ್. ಧೃವನಾರಾಯಣ, ಡಾ.ಎಚ್. ಶಿವಣ್ಣ, ಕುಲಪತಿಗಳೂ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಹೆಚ್.ಪಿ.ಮೋಹನ್, ಅಧ್ಯಕ್ಷರು ಮಲೆನಾಡು ಅಭಿವೃದ್ಧಿ ಮಂಡಳಿ, ಶಿವಮೊಗ್ಗ, ದತ್ತಿ ನಿಧಿ ಸ್ಥಾಪಕರಾದ ಡಾ.ಜಿ. ಕೆ. ವೀರೇಶ್ ಮತ್ತಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: