ಮೈಸೂರು

ಹವ್ಯಾಸಿ ಕಲಾವಿದರ ದಾಖಲೀಕರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಲಿದೆ : ಸಚಿವೆ ಉಮಾಶ್ರೀ

ಹವ್ಯಾಸಿ ಕಲಾವಿದರು ರಂಗಭೂಮಿಗೆ ಮಹತ್ವದ ಕಾಣಿಕೆಗಳನ್ನು ನೀಡುತ್ತಿದ್ದು ಅವರ ಸಾಧನೆಗಳನ್ನು ಒಂದೆಡೆ ದಾಖಲಿಸುವ ಅಗತ್ಯತೆ ಇದೆ. ಅದಕ್ಕಾಗಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹವ್ಯಾಸಿ ರಂಗಭೂಮಿಯ ದಾಖಲೀಕರಣಕ್ಕೆ ಮುಂದಾಗಲಿದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಹೇಳಿದರು.

ಮೈಸೂರಿನ ರಂಗಾಯಣದ ವನರಂಗದಲ್ಲಿ ಸಮತೆಂತೋ ರಂಗಭೂಮಿ ತಂಡವು ಏರ್ಪಡಿಸಿದ್ದ ಸುವರ್ಣ ಸಮತೆಂತೋ ಸಮಾರಂಭವನ್ನು ಉಮಾಶ್ರೀ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹವ್ಯಾಸಿ ರಂಗಭೂಮಿಗೆ ಬೃಹತ್ ಇತಿಹಾಸವಿದೆ. ಹಲವು ತಂಡಗಳು ಯಾವುದೇ ಪ್ರತಿಫಲಾಕ್ಷೇ ಇಲ್ಲದೇ ತಮ್ಮ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿವೆ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳು ಆಗಿರುವುದು ನಿಜವಾದರೂ ಇನ್ನಷ್ಟು ಬೆಳವಣಿಗೆಗಳು ನಡೆಯಬೇಕಿದೆ ಎಂದರು.  ವೃತ್ತಿ ರಂಗಭೂಮಿಯಲ್ಲಿರುವವರ ಮಾಹಿತಿಯು ನಿರ್ದೇಶಕರ ಕಚೇರಿಯಲ್ಲಿ ದೊರೆಯುತ್ತದೆ. ಆದರೆ ಹವ್ಯಾಸಿ ರಂಗಭೂಮಿಯ ಕಲಾವಿದರ ನಿರ್ದೇಶಕರ ಮಾಹಿತಿಯು ಇಲ್ಲವಾಗಿದೆ ಎಂದು ಖೇದ ವ್ಯಕ್ತ ಪಡಿಸಿದರು.

ಪುನರಾವರ್ತಿತ ನಾಟಕಗಳಲ್ಲದೇ ನಮ್ಮಲ್ಲಿ ಇನ್ನೂ ಪ್ರಯೋಗಕ್ಕೆ ಒಳಗಾಗದ ಕೃತಿಗಳಿವೆ. ಅಂತಹ ಅನೇಕ ಕೃತಿಗಳನ್ನು ರಂಗಭೂಮಿಗೆ ಅಳವಡಿಸಿಕೊಳ್ಳಬೇಕು.ಎಂದು ತಿಳಿಸಿದರು.

ಕಲೆಗಾಗಿ ಕೆಲಸ ಮಾಡುವವರೇ ನಿಜವಾದ ಕಲಾವಿದರು. ಈ ಕೆಲಸವನ್ನು ನಮ್ಮ ನಡುವಿರುವ ಎಲ್ಲ ಕಲಾವಿದರೂ ಮಾಡುತ್ತಿದ್ದಾರೆ. ಸಮತೆಂತೋ ತಂಡ 50 ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿ ರಂಗಭೂಮಿಯನ್ನು ಉಳಿಸಿ ಬೆಳೆಸಿರುವುದು ಶ್ಲಾಘನೀಯ ಎಂದರು.

ವಿಮರ್ಶಕ ಪ್ರೊ.ಜಿ.ಎಚ್.ನಾಯಕ ಸುವರ್ಣ ಸಮತೆಂತೋ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಮತೆಂತೋ ತಂಡ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಸುಮಾರು ಹತ್ತು ವರ್ಷಗಳ ಕಾಲ ನಾಟಕ ಚಳುವಳಿ ನಡೆಸಿ ಹವ್ಯಾಸಿ ರಂಗಭೂಮಿಯನ್ನು ಬೆಳೆಸುವ ಕೆಲಸ ಮಾಡಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ಸಮತೆಂತೋ ತಂಡದ ನ.ರತ್ನ, ರಂಗಕರ್ಮಿಗಳಾದ ಪ್ರೊ.ಹೆಚ್.ಎಸ್.ಉಮೇಶ್, ರಾಮೇಶ್ವರಿ ವರ್ಮಾ, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: