ಕರ್ನಾಟಕಪ್ರಮುಖ ಸುದ್ದಿ

39 ಹಿಂದುಳಿದ ತಾಲೂಕುಗಳಲ್ಲಿ ಮಾತೃಪುಷ್ಠಿವರ್ಧಿನಿ ಯೋಜನೆ : ಆರೋಗ್ಯ ಸಚಿವ ರಮೇಶ್ ಕುಮಾರ್

ಬೆಂಗಳೂರು, (ಅ.9): ಮಾತೃ ಪುಷ್ಠಿವರ್ಧಿನಿ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯವರು ಪ್ರಧಾನವಾಗಿ ವಾಸಿಸುತ್ತಿರುವ 39 ಹಿಂದುಳಿದ ತಾಲ್ಲೂಕುಗಳಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರತಿ ದಿನ 5 ಗ್ರಾಂ. ಮೈಕ್ರೋ ನ್ಯೂಟ್ರಿಯೆಂಟ್ ಗ್ರಾನ್ಯೂಲ್ಸ್‍ಗಳನ್ನು ನೀಡುವ ಯೋಜನೆಯಾಗಿದ್ದು, ಈ ಯೋಜನೆಗೆ 10 ಕೋಟಿ ರೂ. ಹಣವನ್ನು ನಿಗದಿಪಡಿಸಲಾಗಿದೆ ಆರೋಗ್ಯ ಮತ್ತು ಕುಟುಂ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ಪ್ರಕಟಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೊದಲನೇ ಸುತ್ತಿನ ಟೆಂಡರ್‍ನಲ್ಲಿ 4 ಬಿಡ್‍ಗಳನ್ನು ಸ್ವೀಕರಿಸಲಾಗಿದ್ದು, ಯಾರೊಬ್ಬರು ಟೆಂಡರ್ ಷರತ್ತುಗಳನ್ನು ಪೂರೈಸದೇ ಇರುವುದರಿಂದ ಈ ಎಲ್ಲಾ 4 ಬಿಡ್‍ಗಳನ್ನು ತಿರಸ್ಕರಿಸಲಾಗಿದೆ. ಎರಡನೇ ಸುತ್ತಿನ ಟೆಂಡರ್‍ನಲ್ಲಿ 4 ಬಿಡ್‍ಗಳನ್ನು ಸ್ವೀಕರಿಸಿದ್ದು, ಟೆಂಡರ್ ಷರತ್ತುಗಳನ್ನು ಪೂರೈಸದ ಎರಡು ಬಿಡ್‍ಗಳನ್ನು ತಿರಸ್ಕರಿಸಲಾಗಿದೆ. ಯುನಿಸೆಫ್ ಷರತ್ತುಗಳ ಪ್ರಕಾರ ವಿಶೇಷ ಬಳಕೆಯ ಆಹಾರ ಧಾನ್ಯಗಳನ್ನು ಉತ್ಪಾದಿಸಲು ಸಂಬಂಧಿಸಿದ ಸಂಸ್ಥೆಯವರು ಎಫ್.ಎಸ್.ಎಸ್.ಎ.ಐ. ನಿಂದ ಪರವಾನಗಿ ಪಡೆಯಬೇಕಾಗಿರುತ್ತದೆ.

ಮೆ: ಹೆಕ್ಸಗಾನ್ ಸಂಸ್ಥೆ ಇವರು ಈ ಪರವಾನಿಗೆಯನ್ನು ಸಲ್ಲಿಸಲು ವಿಫಲರಾಗಿರುವ ಕಾರಣ ಈ ಬಿಡ್‍ನ್ನು ತಿರಸ್ಕರಿಸಲಾಗಿದೆ. ಅಂತಿಮವಾಗಿ ತಾಂತ್ರಿಕ ಪರಿಶೀಲನೆಯಲ್ಲಿ ಮೆ: ಫಾರ್ಮಾವೇದ ಸಂಸ್ಥೆಯ ಬಿಡ್ಡರ್ ರವರು ಒಬ್ಬರೆ ಅರ್ಹರಾಗಿರುತ್ತಾರೆ. 2015-16 ರಲ್ಲಿ ಈ ಸಂಸ್ಥೆಯು ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಇದೇ ಉತ್ಪನ್ನಗಳನ್ನು ರೂ 187.75 ಕ್ಕೆ ಸರಬರಾಜು ಮಾಡಿರುತ್ತಾರೆ. ಆ ವೇಳೆಯಲ್ಲಿ ಶೇ 5% ರಷ್ಟು ವ್ಯಾಟ್ ದರ ಇರುತ್ತದೆ. ಈಗ ಪ್ರಸ್ತುತ 18% ರಷ್ಟು ಜಿ.ಎಸ್.ಟಿ. ತೆರಿಗೆಯನ್ನು ಬಿಡ್ಡರ್ ರವರು ಪಾವತಿಸಬೇಕಾಗಿರುತ್ತದೆ.

ಇಲಾಖೆಯು ಸದರಿ ಉತ್ಪನ್ನಗಳನ್ನು ರೂ. 130/- + ಜಿ.ಎಸ್.ಟಿ. ಸೇರಿ ಸುಮಾರು ರೂ. 153/- ಗಳಿಗೆ ಸರಬರಾಜು ಮಾಡಲು ಮೆ: ಫಾರ್ಮಾವೇದ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದೆ.

ಇಲಾಖೆಯು ಸೂಚಿಸಿರುವ ರೂ 153/- ಗಳನ್ನು ಬಿಡ್‍ದಾರ ಸಂಸ್ಥೆಯವರು ಇನ್ನೂ ಅಂತಿಮ ಒಪ್ಪಿಗೆ ಸೂಚಿಸದಿರುವ ಕಾರಣ ಈ ಗುತ್ತಿಗೆಯನ್ನು ಈ ತಹಲ್‍ವರೆಗೂ ನೀಡಿರುವುದಿಲ್ಲ. ಆದಕಾರಣ, ಅರೆಬರೆ ತಿಳುವಳಿಕೆಯಿಂದ ಮಿಥ್ಯಾರೋಪಮಾಡಿ ತೇಜೋವಧೆ ಮಾಡುವುದು ಸಂಸ್ಕಾರವಂತರ ಲಕ್ಷಣವಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: