ಮೈಸೂರು

ಯುವಜನತೆ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ : ಬಾಬಾ ಸಾಹೇಬ ನೀಲಕಾಂತ ಕಲ್ಯಾಣಿ

ಭಾರತದಲ್ಲಿ ಆವಿಷ್ಕಾರ, ಉದ್ದಿಮೆಗಳು ಕೇವಲ ಘೋಷಣೆಗಳಾಗಿ ಉಳಿದಿಲ್ಲ. ಇವೆರಡು ಪ್ರವರ್ಧಮಾನಕ್ಕೆ ಬಂದಿವೆ. ಭಾರತದ ಯುವಜನತೆಯ ಕಠಿಣ ಶ್ರಮ ಹಾಗೂ ಸಂಕಲ್ಪ ಪ್ರಬಲ ಆರ್ಥಿಕ ಶಕ್ತಿಯಾಗಲು ಕಾರಣವಾಗಲಿದೆ ಎಂದು ಪುಣೆಯ ಭಾರತ್ ಫೋರ್ಜ್ ಕಂಪನಿಯ ಅಧ್ಯಕ್ಷ ಬಾಬಾ ಸಾಹೇಬ ನೀಲಕಾಂತ ಕಲ್ಯಾಣಿ ಹೇಳಿದರು.

ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಏಳನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ ಕಲ್ಯಾಣಿ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿ ಯುವಕರೇ ಇಂದು ಬಹುತೇಕ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ಅನೇಕರು ಮಾಲೀಕರು ಆಗಿದ್ದಾರೆ. ಯುವಜನತೆ ಅರ್ಧದಷ್ಟಿದ್ದು ಅವರಲ್ಲಿ ಆರ್ಥಿಕ ಶಕ್ತಿ ಇದ್ದಲ್ಲಿ ದೇಶದ ಆರ್ಥಿಕತೆಯು ಸಹಜವಾಗಿಯೇ ಮೇಲೇರಲಿದೆ ಎಂದು ಅಭಿಪ್ರಾಯಪಟ್ಟರು.

ಹಿಂದೆ ಸ್ನಾತಕೋತ್ತರ ಪದವಿ ಪೂರೈಸುವ ಯುವತಿಯರ ಸಂಖ್ಯೆ ಕಡಿಮೆ ಇತ್ತು. ಆದರೆ ಇಂದು ರ್ಯಾಂಕ್ ಹಾಗೂ ಪದಕ ಗಳಿಸುವ ಯುವತಿಯರ ಸಂಖ್ಯೆಯೇ ಹೆಚ್ಚಾಗಿದೆ. ಇದು ದೇಶದ ಪ್ರಗತಿಯ ಸೂಚಕವಾಗಿದ್ದು, ಮಹಿಳೆಯರು ಆರ್ಥಿಕವಾಗಿ ಶಕ್ತರಾಗುವ ಮೂಲಕ ದೇಶವನ್ನು ಕಟ್ಟುವ ಕ್ರಿಯೆಯನ್ನು ವೇಗಗೊಳಿಸುತ್ತಾರೆ ಎಂದು ತಿಳಿಸಿದರು.

ಸ್ಥಿರಾಸ್ತಿಗಳ ಬದಲಿಗೆ ಹೂಡಿಕೆಯು ಇಂದು ಜ್ಞಾನದ ಸಂಪತ್ತಿನ ಮೇಲೆ ನಡೆದಿದೆ. ಇದರಿಂದ ಈಗ ಜ್ಞಾನ ಯುಗ ಎಂದು ಕರೆಯುವುದೇ ಉತ್ತಮ ಎಂದು ಬಣ್ಣಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಪ್ರಮಾಣ ಪತ್ರ ವಿತರಿಸಿದರು. 2015-16ನೇ ಸಾಲಿನ ಬಿಇ ಪದವಿ 922, ಎಂಟೆಕ್ ಪದವಿ 231, ಎಂಸಿಎ ಪದವಿ 58, ಎಂಬಿಎ ಪದವಿಯ 108 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಪ್ರತಿ ವಿಭಾಗದಲ್ಲೂ ಅತಿ ಹೆಚ್ಚು ಅಂಕಗಳಿಸಿರುವ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 28 ಪದಕಗಳು ಹಾಗೂ 14 ದತ್ತಿ ಪದಕಗಳನ್ನು ನೀಡಲಾಯಿತು. ಬಿಇಸಿಎಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಸ್.ಬಿಂದುಶ್ರೀ ಮೂರು ಚಿನ್ನದ ಪದಕಗಳನ್ನು ಪಡೆದು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಹೆಚ್.ಧನಂಜಯ್, ಜೆಎಸ್.ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾನಿಲಯದ ಕುಲಪತಿ ಡಾ.ಬಿ.ಜಿ.ಸಂಗಮೇಶ್ವರ್, ತಾಂತ್ರಿಕ ಶಿಕ್ಷಣ ವಿಭಾಗದ ಶೈಕ್ಷಣಿಕ ಹಾಗೂ ಆಡಳಿತ ನಿರ್ದೇಶಕ ಡಾ.ಸಿ.ರಂಗನಾಥಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: