ಕರ್ನಾಟಕ

ಬಿಲ್ಲವ ಸಮಾಜದಿಂದ ನಾರಾಯಣ ಗುರು ಜಯಂತೋತ್ಸವ : ಶೋಷಣೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ : ಸೀತಪ್ಪ ಕುಡೂರು

ಮಡಿಕೇರಿ ಅ.9 : ಸಮಾಜದಲ್ಲಿರುವ ಶೋಷಣೆಯ ವಿರುದ್ಧ ಸಂಘಟಿತ ಹೋರಾಟ ನಡೆಸುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಮಂಗಳೂರಿನ ಅಖಿಲ ಭಾರತ ಬಿಲ್ಲವರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕರ್ನಾಟಕ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರೂ ಆದ ಸೀತಪ್ಪ ಕುಡೂರು ಕರೆ ನೀಡಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಡಿಕೇರಿ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ “ಮಹಾಸಭೆ, ಸಮ್ಮೇಳನ, ಬ್ರಹ್ಮಶ್ರೀ ನಾರಾಯಣ ಗುರು ಜಯಂತೋತ್ಸವ ಮತ್ತು ವಿದ್ಯಾರ್ಥಿ ವೇತನ -ಸನ್ಮಾನ ಸಮಾರಂಭ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ಬೆಳೆಸುವ ಶ್ರದ್ಧೆ, ಪ್ರಾಮಾಣಿಕತೆ ಕೇವಲ ಸಂಘಟಕರಿಗೆ ಮಾತ್ರ ಇದ್ದರೆ ಸಾಲದು. ಸಂಘಟನೆಗೊಂದು ಅರ್ಥ ಬರಬೇಕಾದರೆ ಅದರಲ್ಲಿ ಆಯಾ ಸಮಾಜದ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು. ಮಾತಿಗಿಂತ ಕೃತಿ ಲೇಸೆಂದ ಸೀತಪ್ಪ ಅವಿರತ ಶ್ರಮದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದರು. ಇತರರ ಬದುಕನ್ನು ಪ್ರಶ್ನಿಸುವವರು ಒಮ್ಮೆ ತಮ್ಮ ಬದುಕಿನ ಬಗ್ಗೆ ಚಿಂತಿಸಿಕೊಳ್ಳಬೇಕು, ಆಗ ಮಾತ್ರ ಪ್ರತಿಯೊಬ್ಬರ ಬದುಕಿಗೆ ಅರ್ಥ ಬರಲು ಸಾಧ್ಯವೆಂದರು. ಸಮಾಜದಲ್ಲಿ ಹಿಂದುಳಿದವರು ಅಭ್ಯುದಯವನ್ನು ಕಾಣಬೇಕಾದರೆ ಸಂಘಟಿತರಾಗಿ ಶ್ರಮಿಸಬೇಕು. ಶೋಷಣೆ ವಿರುದ್ಧ ಹೋರಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ವೈ.ಆನಂದರಘು ಮಾತನಾಡಿ, ಪ್ರತಿಯೊಂದು ಸಮಾಜದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಸಂಘಟನೆ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ಎಲ್ಲರೂ ಸಂಘಟನೆಯೊಂದಿಗೆ ಕೈಜೋಡಿಸಬೇಕೆಂದರು. ಮುಂದಿನ ದಿನಗಳಲ್ಲಿ ನಮ್ಮ ಸಂಘದಿಂದ ವಧು-ವರರ ಅನ್ವೇಷಣೆ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು. ಬಿಲ್ಲವ ಸಮಾಜದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಉನ್ನತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಹೇಳಿದರು. ಶಿಕ್ಷಣಕ್ಕಾಗಿ ಇರುವ ಸಾಲ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚಿತ್ರಾವತಿ ಪೂವಪ್ಪ(ನಾಟಿ ವೈದ್ಯ), ಶೋಭಾ ಮುತ್ತಪ್ಪ ಮತ್ತು ಕು.ನಯನ ಬಿ.ಬಿ.(ಕ್ರೀಡೆ)ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಮಕ್ಕಂದೂರು ಗ್ರಾಮದ ಸುವರ್ಣ ಕಾಫಿ ಕ್ಯೂರಿಂಗ್ ಉದ್ಯಮಿ ರಮೇಶ್ ಪೂಜಾರಿ ಅವರು ವೈಯಕ್ತಿಕವಾಗಿ “ಸುವರ್ಣ ದತ್ತಿ ನಿಧಿ”ಯನ್ನು ಸ್ಥಾಪಿಸಲು 51 ಸಾವಿರ ರೂ.ಗಳನ್ನು ಉದಾರವಾಗಿ ನೀಡಿದರು. ಅದರ ವಾರ್ಷಿಕ ಬಡ್ಡಿ ಹಣದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತೆ ಹೇಳಿದರು.
ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ.ಎಂ.ರಾಜಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲಾವತಿ ಪೂವಪ್ಪ, ಚಂದ್ರಶೇಖರ್ ಸುನಿಲ್, ಜಿಲ್ಲಾ ಬಿಲ್ಲವರ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ರತ್ನವಿಜಯ ವೇದಿಕೆಯಲ್ಲಿದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: