ಮೈಸೂರು

ರಾಜಕಾಲುವೆ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ಮೈಸೂರು, ಅ.೯: ಇತ್ತೀಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದ ನಗರದ ಕನಕಗಿರಿ, ಗುಂಡೂರಾವ್ ನಗರ, ಮುನೇಶ್ವರ ನಗರ ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿದ್ದ ಹಿನ್ನೆಲೆಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ರಾಜಕಾಲುವೆ ಒಳಚರಂಡಿ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
ಕೃಷ್ಣರಾಜ ಕ್ಷೇತ್ರದ ವಾರ್ಡ್ ನಂ.೫ ರ ವ್ಯಾಪ್ತಿಗೆ ಬರುವ ರಾಜ ಕಾಲುವೆಗೆ ಅಡ್ಡಲಾಗಿ ಮೈಸೂರು ನಂಜನಗೂಡು ರಸ್ತೆಯ ಹೋಟೆಲ್ ಕಾಮತ್ ಬಳಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ೧೬ ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ಹೆದ್ದಾರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಈ ವೇಳೆ ಮಾತನಾಡಿದ ಶಾಸಕ ಎಂ.ಕೆ.ಸೋಮಶೇಖರ್, ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕನಕಗಿರಿ, ಗುಂಡೂರಾವ್ ನಗರ, ಮುನೇಶ್ವರ ನಗರ ಬಡಾವಣೆಗಳು ಜಲಾವೃತವಾಗಿದ್ದವು. ಇದರಿಂದ ಸಾಕಷ್ಟು ಹಾನಿಯಾಗಿತ್ತು. ನೀರು ಸರಾಗವಾಗಿ ಹರಿದು ಹೋಗದೇ ಇದ್ದುದರಿಂದ ಈ ಸಮಸ್ಯೆ ನಿರ್ಮಾಣವಾಗಿತ್ತು. ಅಲ್ಲದೆ ರಾಜ ಕಾಲುವೆ ಸರಿ ಇಲ್ಲದಿದ್ದರಿಂದ ಮಳೆಯ ನೀರು ಸರಾಗವಾಗಿ ಹೋಗದೇ ರಸ್ತೆಯಲ್ಲಿಯೇ ನಿಂತು ಜನಸಾಮಾನ್ಯರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ರಾಜ ಕಾಲುವೆ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇನ್ನು ಎರಡು ತಿಂಗಳ ಒಳಗಾಗಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಈ ವೇಳೆ ಹಲವರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: